Friday, December 18, 2009
Save the Cowಗೋವು ಪಾಲನೆಯಿಂದ ಭೂಮಿಯ ಫಲವತ್ತತೆ
ಬೆಳಿಗ್ಗೆ ಎದ್ದು ಸುಮಾರು ಜನ ಇನ್ನೂ ಸರಿಯಾಗಿ ಕಣ್ಣೇ ಬಿಟ್ಟಿರುವುದಿಲ್ಲ. ಆಗಲೇ ಬೇಕು ಬೆಡ್ ಕಾಫಿ. ಕೆಲವರಿಗಂತೂ ಅಟ್ಲೀಸ್ಟ್ ಒಂದು ಕಾಫಿ ಅಥವಾ ಒಂದು ಟೀ ಇಲ್ಲದಿದ್ರೆ ಆ ದಿನ ಅವರ ಪಾಲಿಗೆ ನರಕಸದೃಶ. ಇವೆಲ್ಲ ಸಾಮಾನ್ಯವಾಗಿ ದೊಡ್ಡವರ ವಿಷಯ. ಹಾಗೆಯೇ ನಮ್ಮಂಥ ಮಕ್ಕಳ ಉತ್ತಮ ಬೆಳವಣಿಗೆಗೆ ದಿನಕ್ಕೆ ಒಂದು ಲೋಟ ಹಾಲು ಅಗತ್ಯ. ಹಾಗೆ ನೋಡಿದರೆ ಪ್ರತಿಯೊಬ್ಬ ವ್ಯಕ್ತಿಗೂ ಹಾಲು ಅತ್ಯಗತ್ಯ.
1 ಲೀಟರ್ ಹಾಲು ಬೇಕಾದರೆ ಏನ್ಮಾಡ್ಬೇಕು? ಅಂತ ಪ್ರಶ್ನೆ ಬಂದ್ರೆ "ಅದೇನ್ಮಹಾ! ಬರೀ ಹದಿನೆಂಟು ರೂಪಾಯಿ ಬಿಸಾಕಿದ್ರೆ ಡೈರೀಲಿ ಸಿಗತ್ತಪ್ಪಾ" ಅಂತ ಉತ್ತರ ಕೊಡ್ತೀರಾ. ಕೊಡ್ಬಹುದು. ಆದ್ರೆ ಉತ್ತರ ಸರಿ, ಮಾರ್ಕ್ಸ್ ಸೊನ್ನೆ! ಯಾಕೆಂದ್ರೆ ಹಾಲು ಕೊಡುವ ಹಸುವನ್ನೇ ನಾವು ಉಳಿಸ್ತಿಲ್ಲವಲ್ಲಾ. ಹಸುವೇ ಇಲ್ಲವಾದ ಮೇಲೆ ಎಲ್ಲಿಂದ ಹಾಲು? ಇನ್ನೆಲ್ಲಿಂದ ಡೈರಿ? ಆದ್ರೂ ಒಂದು ಸ್ವಾರಸ್ಯ ಗೊತ್ತಾ? ಜಗತ್ತಿನ ಹಾಲು ಉತ್ಪಾದನೆಯಲ್ಲಿ ಮೊದಲ ಸ್ಥಾನ ನಮ್ಮ ಭಾರತಕ್ಕೇ ಕಂಡ್ರೀ! ಏನಿದು ವಿಪರ್ಯಾಸ ಅಂತೀರಾ? ನಾವು ಹಸುಗಳನ್ನು ಬರೀ ಹಾಲು ಕೊಡೋ ಯಂತ್ರ ಎಂದುಕೊಂಡಿದ್ದೇವೆ. ಅದಕ್ಕೇ ನಂ.1. ಹೀಗಾಗಿ ಹಾಲುಕರೆಯುವ ಮಿಷೆನ್ ಹಾಕಿ ರಕ್ತವನ್ನೂ ಹಿಂಡಿ, ಹಿಂಡಿ ಬಿಳಿ ದ್ರವದ ರೀತಿಯಲ್ಲಿ ಹೊರಹಾಕಿ ಹಾಲು ಅಂತಾ ಇದೀವಿ. ಆದ್ರೆ ಒಂದು ವಿಷಯ ಜ್ಞಾಪಕದಲ್ಲಿರಲಿ ಬೆಳ್ಳಗಿದ್ದದ್ದೆಲ್ಲಾ ಹಾಲಲ್ಲ.
ಗೋಮೂತ್ರ:
ಗೋ ಉತ್ಪನ್ನಗಳಲ್ಲಿ ಅತ್ಯಂತ ಹೆಚ್ಚು ಔಷಧೀಯ ಗುಣವುಳ್ಳದ್ದು ಗೋಮೂತ್ರ. ಇದು ಸಸ್ಯಗಳಿಗೆ ತಗುಲುವ ಕೀಟಗಳಿಗೆ ರಾಮಬಾಣ. ಕೆಲವು ಸಸ್ಯಗಳ ಬೀಜಬಿತ್ತನೆಯ ಮೊದಲು ಪುಷ್ಟಿಯುತವಾಗಿ ಬೆಳಿಯಲಿ ಎಂದು ಗೋಮೂತ್ರದಲ್ಲಿ ನೆನೆಸಿಟ್ಟು ನಂತರ ಬಿತ್ತುವ ಪರಿಪಾಠವೂ ಉಂಟು. ಹಾಗೆಯೇ ತಲೆಯಲ್ಲಿನ ಹೊಟ್ಟಿಗೂ ಗೋಮೂತ್ರ ಔಷಧ
ತುಪ್ಪ:
ತುಪ್ಪ ಎಂಬುದು ತೇಜಸ್ಸು ಪ್ರಧಾನ ದ್ರವ್ಯ. ’ಘೃತಂ ತು ಸೌಮ್ಯಂ ಶೀತವೀರ್ಯಂ(ಸುಶ್ರುತ ಸಂಹಿತಾ 179-80)’ ಎಂಬ ಶ್ಲೋಕಗಳಲ್ಲಿ ತುಪ್ಪದ ವಿಶ್ಲೇಷಣೆ ಮಾಡಲಾಗಿದೆ. ಅದರ ಪ್ರಕಾರವಾಗಿ ತುಪ್ಪದಲ್ಲಿ ಸೋಮಾಂಶ ಕಂಡುಬರುತ್ತದೆ. ಇದರಿಂದ ಪಿತ್ತಶಮನ, ಅಗ್ನಿದೀಪಕ ಕಾರ್ಯಗಳು ನಡೆಯುತ್ತವೆ. ಘೃತದ ಪ್ರಭಾವದಿಂದ ಬುದ್ಧಿಶಕ್ತಿ, ಕಾಂತಿ, ಸ್ವರ, ಲಾವಣ್ಯ, ಪರಾಕ್ರಮ, ಓಜೋಗುಣ, ಬಲ ವೃದ್ಧಿಯಾಗುತ್ತದೆ. ಹೀಗಾಗಿ ಘೃತ ಸೇವನೆ ಮಹತ್ವವಾದ ಪಾತ್ರವನ್ನು ವಹಿಸುತ್ತದೆ.
ಮೊಸರು ಮತ್ತು ಮಜ್ಜಿಗೆ:
ಮೊಸರು ಆಯುರ್ವೇದದ ದೃಷ್ಟಿಯಿಂದ ದೇಹಕ್ಕೆ ತುಂಬ ಉಪಯುಕ್ತವಾದದ್ದು. ಆದರೆ ಇದನ್ನು ಹಗಲಲ್ಲೇ ಬಳಸಬೇಕು. ಅದರಿಂದ ಉತ್ಪತ್ತಿಯಾದ ಮಜ್ಜಿಗೆಯೂ ಅಷ್ಟೇ ಮಹತ್ವದ್ದು. ಅದನ್ನೇ ಚರಕಾಚಾರ್ಯರು ತಮ್ಮ ಸಂಹಿತೆಯಲ್ಲಿ ಹೀಗೆ ಹೇಳಿದ್ದಾರೆ ’ನ ತಕ್ರಸೇವಿ ವ್ಯಯತೇ ಕದಾಚಿತ್’ ಎಂಬ ಶ್ಲೋಕದಲ್ಲಿ ಹೇಳಿರುವಂತೆ ದೇವತೆಗಳಿಗೆ ಅಮೃತ ಹೇಗೆ ಹಿತವೋ ಹಾಗೆಯೇ ಮನುಷ್ಯನಿಗೂ ಮಜ್ಜಿಗೆ ಹಿತ.
ಪಂಚಗವ್ಯ:
ಸಗಣಿ, ಗೋಮೂತ್ರ, ಹಾಲು, ಮೊಸರು ಮತ್ತು ತುಪ್ಪ ಈ ಐದು ಅಂಶಗಳನ್ನೊಳಗೊಂಡ ಪಂಚಗವ್ಯವು ಚರ್ಮ ಮತ್ತು ಮೂಳೆಯ ತೊಂದರೆಗಳನ್ನು ಸರಿಪಡಿಸುವುದು. ಈ ಐದೂ ಅಂಶಗಳನ್ನು ಕ್ರಮವಾಗಿ 4 8 6 5 4 ಅನುಪಾತದಲ್ಲಿ ಬೆರೆಸಲಾಗುತ್ತದೆ. ಇದು ಪವಿತ್ರವಾಗಿದ್ದು, ವೈದಿಕಪದ್ಧತಿಯಲ್ಲಿ ವಿಶಿಷ್ಟ ಪಾತ್ರವನ್ನು ಹೊಂದಿದೆ. ಇವಿಷ್ಟು ಅಂಶಗಳು ಗೋವಿನಿಂದ ಪಡೆಯುವ ಭೌತಿಕ ಉಪಯೋಗಗಳು. ದೈವಿಕ ಸ್ತರದಲ್ಲಿಯೂ ಗೋವಿನ ಪ್ರಭಾವ ಲಕ್ಷಿಸಲ್ಪಟ್ಟಿದೆ
ವೈದಿಕ ದೃಷ್ಟಿ:
ಭಾರತೀಯ ಪರಂಪರೆಯಲ್ಲಿ 33 ದೇವತೆಗಳ ಕಲ್ಪನೆ ಪ್ರಮುಖವಾದುದು. ಭೂಃ, ಭುವಃ, ಸುವಃ, ಜನಃ, ಮಹಃ, ತಪಃ, ಸತ್ಯಂ ಈ ಏಳು ಲೋಕಗಳನ್ನು ವ್ಯಾಪಿಸಿ ಈ ದೇವತಾ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಬ್ರಹ್ಮಾಂಡದಲ್ಲಿರುವ ಈ ಎಲ್ಲಾ ಶಕ್ತಿಗಳು ಪಿಂಡಾಂಡಗಳಲ್ಲೂ ನಿವಿಷ್ಟವಾಗಿರುತ್ತವೆ. ಆದರೆ ಜೀವರಾಶಿಗಳಲ್ಲಿನ ಎಲ್ಲಾ ಪಿಂಡಾಂಡಗಳಿಗೂ (ಶರೀರಗಳಿಗೂ) ಆ ದೇವತಾ ಶಕ್ತಿಗಳನ್ನು ಪ್ರತಿಫಲಿಸುವುದು ಸಾಧ್ಯವಿಲ್ಲ. ಭಗವಂತನ ವರಪ್ರಸಾದದಿಂದ ಹಸುಗಳ ಶರೀರಕ್ಕೆ ದೇವತಾಶಕ್ತಿಗಳನ್ನು ಪ್ರತಿಫಲಿಸುವ ವಿಶಿಷ್ಟ ಶಕ್ತಿಯಿದೆ. ಆಕಳುಗಳ ನಾಡಿಯಲ್ಲಿ ಸೂರ್ಯಸೋಮರ ಔಷಧ ಕಿರಣಗಳನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯಿದೆ. ಇದು ಅವುಗಳಿಗೆ ನಿಸರ್ಗದತ್ತ ವರ.
ಪೃಥ್ವಿಯಂತೂ ಸೋಮಸೂರ್ಯರ ಸಂಗಮದಿಂದ ಅಸಂಖ್ಯ ಜೀವರಾಶಿಗಳ ತಾಣವಾಗಿದ್ದಾಳೆ ಭೂಮಿಗೂ ಸಂಸ್ಕೃತ ಭಾಷೆಯಲ್ಲಿ ಗೋ ಎಂಬ ಹೆಸರಿದೆ. ಸೂರ್ಯನಲ್ಲಿರುವ ಸಾತ್ವಿಕ ಕಿರಣಕ್ಕೂ ಈ ಹೆಸರಿರುವುದು ತಿಳಿದುಬರುತ್ತದೆ. ಹಾಗಾಗಿಯೇ ಗಾಯತ್ರೀ ಮಂತ್ರವು ಸೂರ್ಯನಲ್ಲಿತುವ ಭರ್ಗ ಎಂಬ ಕಿರಣದ ಧ್ಯಾನದ ಬಗ್ಗೆ ತಿಳಿಸುತ್ತದೆ. ಈ ಭರ್ಗವೆಂಬ ತೇಜವು ಮಾನವ ಲೋಕಕ್ಕೆ ಹಿತಕರವಾಗಿದೆ. ಅದೇ ಸೂರ್ಯನಿಂದ ಸೋಮಕಿರಣದ ಸಂಪರ್ಕವಿಲ್ಲದಿರುವಾಗ ಭೂಮಿಗೆ ಅಪಾಯಕಾರಿಯಾದ ಕಿರಣಗಳು ಹೊಮ್ಮಿಬರುತ್ತವೆ. ಈ ದೋಷಕ್ಕೆ ಸರ್ಪದೋಷವೆಂದು ಹೆಸರು.
ಈ ದೋಷ ದೂರೀಕರಿಸಲು ಇರುವ ಏಕೈಕ ಉಪಾಯ ಭಾರತೀಯ ತಳಿಯನ್ನು ಪ್ರತಿ ಮನೆಯಲ್ಲಿ ಸಾಕುವುದು. ಇಂತಹ ಗೋವಿನ ಪಂಚಗವ್ಯಗಳನ್ನು ಆಗಾಗ ಪ್ರಾಶನಮಾಡುವುದಾಗಿರುತ್ತದೆ. ನಿಸರ್ಗದಲ್ಲಾದ ವಿವಿಧ ವೈಪರೀತ್ಯಗಳಿಂದ ಕೇಳರಿಯದ, ಕಂಡರಿಯದ ರೋಗಗಳು ಹೆಚ್ಚುತ್ತಿವೆ. ಪಂಚಗವ್ಯದ ಮೇಲೆ ನಡೆದ ವಿಶ್ವ ಮಟ್ಟದ ಸಮ್ಮೇಳನದಲ್ಲಿ ಶುದ್ಧ ಭಾರತೀಯ ತಳಿಯ ಪಂಚಗವ್ಯದ ಮಹತ್ವದ ಬಗ್ಗೆ ಅನೇಕ ವೈಜ್ಞಾನಿಕ ಸತ್ಯಗಳು ಹೊರಹೊಮ್ಮಿವೆ. ಈ ಬೆಳಕಿನಲ್ಲಿ ನಾವು ಗೋವಿನ ವೈಜ್ಞಾನಿಕ ಮಹತ್ವವನ್ನರಿತು ಭಾರತೀಯ ಜಾನಪದ ಸಂಸ್ಕೃತಿಯನ್ನು ಮತ್ತೆ ಪುನರುಜ್ಜೀವನಗೊಳಿಸಲು ಸಿದ್ಧರಾಗಬೇಕಾಗಿದೆ.
Subscribe to:
Post Comments (Atom)
No comments:
Post a Comment