
ತರಕಾರಿ ಬಳಸಿ ಆರೋಗ್ಯ ಗಳಿಸಿ ಎನ್ನುವುದು ತರಕಾರಿಯಷ್ಟೇ ಜನಪ್ರಿಯ ಮಾತು. ಆದರೆ ತರಕಾರಿ ಬಳಸುವ ಒಳಗುಟ್ಟುಗಳು ಎಷ್ಟು ಜನಕ್ಕೆ ಗೊತ್ತು ? ತರಕಾರಿ ಬಳಕೆಯ ಕೆಲವು ಕಿವಿಮಾತು..ಇದರಲ್ಲಿ ಕೆಲವು ನೀವು ಮೊದಲೇ ಕೇಳಿದಿರಬಹುದು.ಕೆಲವು ಹೊಸದಿರಬಹುದು ಉಪಯುಕ್ತ ಮಾಹಿತಿ ಎಂದಿಗೂ ಪ್ರಸ್ತುತ ಒಪ್ಪಿಸಿಕೊಳ್ಳಿ
ತರಕಾರಿ ಹಾಗೂ ಆಹಾರ ಸಾಮಗ್ರಿಗಳನ್ನು ಬಳಸುವ ಸುಲಭ ವಿಧಾನಗಳನ್ನು ಮಹಿಳೆಯರು ತಿಳಿದುಕೊಂಡರೆ ಸಮಯವನ್ನು ಉಳಿಸಿಕೊಂಡು ಇನ್ನಿತರೇ ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದು. ಅಂಥ ಕೆಲವು ಸುಲಭ ಉಪಾಯಗಳು ನಿಮಗೆ ಗೊತ್ತಾ ?
* ಸೀಮೆ ಬದನೆಕಾಯಿಯನ್ನು ಎರಡು ಭಾಗವಾಗಿ ಹೆಚ್ಚಿ, ಒಂದಕ್ಕೊಂದು ಉಜ್ಜಿ, ನೀರಿಗೆ ಹಾಕಿ ತೆಗೆದು ಉಪಯೋಗಿಸಿ. ಇದರಿಂದ ನಿಮ್ಮ ಕೈ ಅಂಟಾಗುವುದನ್ನು ತಡೆಯಬಹುದು.
* ಬೆಣ್ಣೆ ಕಾಯಿಸಿ ಇಳಿಸುವ ಮುನ್ನ ತೊಟ್ಟು ತೆಗೆದ ಒಂದೆರಡು ವೀಳ್ಯದೆಲೆಯನ್ನು ಅದರಲ್ಲಿ ಹಾಕಿ ತೆಗೆದರೆ ತುಪ್ಪ ಸುವಾಸನೆಯುಕ್ತವಾಗುವುದು.
* ದೊಣ್ಣೆ ಮೆಣಸಿನಕಾಯಿಯನ್ನು ಮಧ್ಯದಲ್ಲಿ ಕತ್ತರಿಸಿ, ಒಳಭಾಗವನ್ನು ಚಾಕುವಿನಿಂದ ಹೆರೆದು ಕೊಡವಿದರೆ ಬೀಜಗಳೆಲ್ಲ ಉದುರುತ್ತವೆ. ತಿನ್ನುವಾಗ ಹಲ್ಲಿನ ಮಧ್ಯೆ ಬೀಜ ಸಿಕ್ಕಿಕೊಂಡು ತೊಂದರೆಯಾಗದು.
* ಬದನೆಕಾಯಿ ಹೆಚ್ಚಿ ಕೂಡಲೇ ಉಪ್ಪು ನೀರಿಗೆ ಹಾಕಿದರೆ ಹೋಳುಗಳು ಕಪ್ಪಾಗುವುದಿಲ್ಲ.
* ಈರುಳ್ಳಿ ತುದಿಗಳನ್ನು ಕತ್ತರಿಸಿ, ಎರಡು ಭಾಗ ಮಾಡಿ ಒಂದು ಗಂಟೆ ನೀರಿನಲ್ಲಿ ಹಾಕಿಟ್ಟರೆ ಸಿಪ್ಪೆ ಸುಲಿಯುವುದು ಸುಲಭ. ಕಣ್ಣೂ ಉರಿಯುವುದಿಲ್ಲ.
* ಅನ್ನ ಮಾಡುವಾಗ ಅದಕ್ಕೆ ಒಂದು ಚಮಚ ಎಣ್ಣೆ ಅಥವಾ ಸ್ವಲ್ಪ ನಿಂಬೆರಸ ಹಾಕಿದರೆ, ಅನ್ನ ಉದುರುದುರಾಗುತ್ತದೆ.
* ಒಗ್ಗರಣೆ ಹಾಕುವ ಮೊದಲು ಕಡಲೆಕಾಯಿ ಬೀಜವನ್ನು ಮೊದಲು ಹುರಿದು ತೆಗೆದಿಡಿ. ನಂತರ ಸಾಸಿವೆ, ಕರಿಬೇವು ಇತ್ಯಾದಿಗಳನ್ನು ಹುರಿದು ಕಡಲೆಕಾಯಿ ಬೀಜ ಸೇರಿಸಿದರೆ ಹಸಿ ವಾಸನೆ ಇಲ್ಲದೆ ರುಚಿಯಾಗಿರುವುದು.
* ಹಾಗಲಕಾಯಿಯನ್ನು ಚಿಕ್ಕದಾಗಿ ಹೆಚ್ಚಿ ಅರಿಷಿಣ, ಉಪ್ಪು ಬೆರೆಸಿದ ನೀರಿನಲ್ಲಿ ಹಾಕಿ. ಸ್ವಲ್ಪ ಹೊತ್ತಿನ ನಂತರ ನೀರನ್ನು ಹಿಂಡಿ ತೆಗೆದರೆ ಕಹಿ ಅಂಶ ಇರುವುದಿಲ್ಲ.
* ಚಟ್ನಿ, ಗೊಜ್ಜಿಗೆ ಬಳಸುವ ಹುಣಸೆ ಹಣ್ಣನ್ನು ಮೊದಲು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿಡಿ. ರುಬ್ಬಲು ಸುಲಭವಾಗುವುದು.
* ಕರಿಬೇವನ್ನು ಬೇಳೆಯ ಜತೆಯಲ್ಲೇ ಬೇಯಲು ಇಟ್ಟರೆ ಅದರ ಸಾರವೆಲ್ಲ ಸಾರಿಗೆ ಸೇರಿಕೊಳ್ಳುವುದಲ್ಲದೆ ಸುವಾಸನೆಯೂ ಹೆಚ್ಚುವುದು.
* ಹುರುಳಿಕಾಯಿ, ಗೋರಿಕಾಯಿಗಳನ್ನು ಮಾರುಕಟ್ಟೆಯಿಂದ ತಂದ ಕೂಡಲೇ ನಾರು ಬಿಡಿಸಿಟ್ಟರೆ ಕಾಯಿ ಬಲಿಯದು.
* ಹುರುಳಿಕಾಯಿ ಹಾಗೂ ಗೋರಿಕಾಯಿಗಳನ್ನು ಹುರಿಯುವಾಗ ಒಂದು ಚಿಟಿಕೆ ಉಪ್ಪು ಅಥವಾ ಸಕ್ಕರೆ ಹಾಕಿದರೆ ಅದರ ಹಸಿರು ಬಣ್ಣ ಹಾಗೆಯೇ ಉಳಿಯುವುದು.
* ತಾಜಾ ಹಸಿ ಮೆಣಸಿನಕಾಯಿಯ ತೊಟ್ಟು ಬಿಡಿಸಿಟ್ಟರೆ ಅದು ಬೇಗ ಹಣ್ಣಾಗುವುದಿಲ್ಲ.
* ಮಸಾಲೆ ತಯಾರಿಸುವಾಗ ರುಬ್ಬುವ ಖಾರಕ್ಕೆ ಒಂದೆರಡು ಹಸಿ ಟೊಮೇಟೊ ಹಾಕಿ. ಇದರಿಂದ ಸಾರು ಒಳ್ಳೆಯ ಬಣ್ಣ ಪಡೆಯುವುದಲ್ಲದೆ ರುಚಿ ಹೆಚ್ಚುವುದು.
* ಹಸಿ ಮೆಣಸಿನಕಾಯಿ ಖಾರಕ್ಕೆ ಉಪ್ಪಿನ ಜತೆ ಸ್ವಲ್ಪ ನಿಂಬೆರಸವನ್ನೂ ಹಾಕಿ ತಿರುವಿದರೆ ಬಹಳ ದಿನಗಳವರೆಗೂ ತಿನ್ನಲು ಬಳಸಬಹುದು.
* ಹುರುಳಿಕಾಯಿ, ಗೋರಿಕಾಯಿ, ಕ್ಯಾರೆಟ್‌ಗಳು ಬಾಡಿದ್ದರೆ ಸ್ವಲ್ಪ ಹೊತ್ತು ಉಪ್ಪು ನೀರಿನಲ್ಲಿ ಹಾಕಿಡಿ. ಮತ್ತೆ ಮೊದಲಿನ ತಾಜಾತನ ಮರಳುವುದು.
* ಕೈಗೆ ಸ್ವಲ್ಪ ಕೊಬ್ಬರಿ ಎಣ್ಣೆ ಸವರಿಕೊಂಡು ಬೀಟ್‌ರೂಟ್ ಹೆಚ್ಚಿದರೆ ಕೈ ಕೆಂಪಾಗದು.
* ಪರಂಗಿ ಹಣ್ಣು ಅಥವಾ ಕಾಯಿ ಹೆಚ್ಚುವಾಗ ಮೊದಲು ಸಿಪ್ಪೆ ತೆಗೆದು ಅನಂತರ ತೊಟ್ಟು ಹಾಗೂ ತುದಿ ತೆಗೆಯಿರಿ. ಇದರಿಂದ ಹಾಲು ಜಿನುಗಿ ಜಾರುವುದು ತಪ್ಪುತ್ತದೆ.
* ಪುದೀನಾ ಚಟ್ನಿ ರುಬ್ಬುವಾಗ ಸ್ವಲ್ಪ ನಿಂಬೆರಸ ಹಾಕಿದರೆ ಚಟ್ನಿಯ ಬಣ್ಣ ಹಸಿರಾಗಿಯೇ ಇರುವುದು.
* ಅಕ್ಕಿರೊಟ್ಟಿ ಮಾಡಲು ಹಿಟ್ಟನ್ನು ಬೇಯಿಸುವಾಗ ಒಂದು ಟೇಬಲ್ ಚಮಚ ಚಿರೋಟಿ ರವೆ ಹಾಕಿದರೆ ರೊಟ್ಟಿಯ ಅಂಚು ಸೀಳುವುದಿಲ್ಲ.
No comments:
Post a Comment