Friday, December 18, 2009

ಇವು ಅಡುಗೆಮನೆ ಪಿಸುಮಾತಲ್ಲ.. ಕಿವಿ ಮಾತುಗಳು!

ಟೇಸ್ಟ್‌ಫುಲ್‌ ಟೀ ಬೇಕೆ? ಗರಿಗರಿ ದೋಸೆ ಮೇಲೇಳಲು ಏನು ಮಾಡಬೇಕು? ಮೆಣಸಿನ ಕೈ ಕಿವುಚಿದ ಕೈ ಉರಿಯುತ್ತಿದೆಯೇ? ಅಡುಗೆಮನೆ ಹೊಕ್ಕವರಿಗೆ ಇಂಥ ಪ್ರಶ್ನೆಗಳೇಳುವುದು ಸಹಜ. ಅದರಲ್ಲೂ ಅಡುಗೆ ಮನೆ ಹೊಸ್ತಿಲೂ ತುಳಿಯದ, ಹೊಸದಾಗಿ ಮದುವೆಯಾಗಿರುವವರು ಕೆಲ ಸೂಚನೆಗಳನ್ನು ಪಾಲಿಸಿದರೆ ಗಂಡನಿಂದಲೂ ಶಭಾಸ್ ಗಿರಿ ಅತ್ತೆಯಿಂದಲೂ ಭೇಷ್!

ಅಡಿಗಡಿಗೆ ಉಪಯೋಗಕ್ಕೆ ಬರುವ ಸಲಹೆಗಳು :

1. ಬಾಳೆ ಹಣ್ಣಿನಚಿಪ್ಪನ್ನು ಒಂದು ದಾರದಲ್ಲಿ ಕಟ್ಟಿ ಗೋಡೆಯ ಮೊಳೆ, ಹುಕ್‌ಗೆ ನೇತಾಕಿದರೆ, ಹಣ್ಣಿನ ಕೆಳಭಾಗ ಕಪ್ಪಾಗದೆ ಕೆಡದೆ ಇರುತ್ತದೆ.
2. ಮೆಣಸಿನಕಾಯಿ ಹೆಚ್ಚಿದ ಅಥವಾ ತುಂಡರಿಸಿದ ನಂತರ ಕೈಗೆ ಯಾವುದೇ ಎಣ್ಣೆ ಹಚ್ಚಿಕೊಂಡು ಪೇಪರ್‌ನಿಂದ ಒರೆಸಿ ಸಾಬೂನಿನಿಂದ ತೊಳೆದರೆ ಕೈಲಿ ಖಾರ ಉಳಿಯುವುದಿಲ್ಲ.
3. ಈರುಳ್ಳಿ ಹೆಚ್ಚುವಾಗ ಕಣ್ಣಲ್ಲಿ ನೀರು ಸುರಿಯುತ್ತದೆಯಲ್ಲವೇ? ಕನ್ನಡಕ ಧರಿಸಿ ಹೆಚ್ಚಿ. ಕಣ್ಣಲ್ಲಿ ನೀರು ಬರುವುದಿಲ್ಲ.
4. ಟೀ ಮಾಡುವಾಗ ಕಿತ್ತಳೆ ಸಿಪ್ಪೆ, ಹಸಿ ಶುಂಠಿ, ತುಳಸಿ, ಹೀಗೆ ಒಂದೊಂದುಸಲ ಒಂದೊಂದನ್ನು ಹಾಕಿ ಟೀ ಮಾಡಿದರೆ ಬಹಳ ರುಚಿ ಕೊಡುತ್ತೆ. ಆರೋಗ್ಯಕ್ಕೂ ಒಳ್ಳೆಯದು.
5. ಅಡಿಗೆ ಮನೆಯ ಸಿಂಕ್‌ ಹತ್ತಿರ ಒಂದು ಹಳೆಯ ಟೂತ್‌ ಬ್ರಷ್‌ ಇಡಿ, ನಕಾಸೆ ಇರುವ ಪಾತ್ರೆ ತಿಕ್ಕಲು ಉಪಯೋಗವಾಗುತ್ತೆ.
6. ಮನೆ ಗುಡಿಸುವ ಪೊರಕೆ, ಬಾತ್‌ರೂಂ ತೊಳೆಯುವ ಪೊರೆಕೆಗೆ ದಾರದ ಕುಣಿಕೆ ಹಾಕಿ ಬಾಗಿಲ ಹಿಂದೆ/ಮೂಲೆಯಲ್ಲಿ ನೇತುಹಾಕಿ, ಪೊರಕೆ ಕಡ್ಡಿ ಹಾಳಾಗುವುದಿಲ್ಲ.
7. ಬಾಳೆ ಹಣ್ಣಿನ ರಸಾಯನ ಮಾಡುವಾಗ ಒಂದು ಅರ್ಧ ಚಮಚ ಒಳ್ಳೆ ತುಪ್ಪ ಹಾಕಿದರೆ ಬಾಳೆಹಣ್ಣು ಕಪ್ಪಾಗುವುದಿಲ್ಲ, ರುಚಿಯು ಹೆಚ್ಚುತ್ತದೆ.
8. ಒಂದುಪಾವು ಗೋಧಿ ಹಿಟ್ಟಿಗೆ ಸ್ವಲ್ಪ ಉಪ್ಪು ಮತ್ತು ಒಂದೆರಡು ಬ್ರೆಡ್ಡಿನ ಬಿಳಿಭಾಗದ ಪುಡಿ (ಮಿಕ್ಸಿಯಲ್ಲಿ ಮಾಡಿ) ಹಾಕಿ ಕಲೆಸಿದರೆ ಚಪಾತಿ ತುಂಬಾ ಮೃದುವಾಗಿ ಆಗುತ್ತದೆ.
9. ನಿಮ್ಮ ಮನೆಯಲ್ಲಿ ಮೂರು ನಾಲ್ಕು ಬೇಡವಾದ ಗ್ಯಾಸ್‌ ಲೈಟರ್‌ಗಳಿದ್ದರೆ ಅವುಗಳನ್ನು ಆಗಾಗ್ಗೆ ಬದಲಾಯಿಸುತ್ತಾ ಉಪಯೋಗಿಸಿದರೆ, ಎಲ್ಲಾ ಲೈಟರ್‌ಗಳೂ ಚೆನ್ನಾಗಿ ಕೆಲಸ ಮಾಡುತ್ತವೆ.
10. ಕಬ್ಬಿಣದ ಬಾಣಲೆ, ರೊಟ್ಟಿ ತವ ಉಪಯೋಗಿಸಿ ತೊಳೆದ ನಂತರ ಒರೆಸಿ ಸ್ವಲ್ಪ ಅಡಿಗೆ ಎಣ್ಣೆ ಹಚ್ಚಿಡಿ, ಮತ್ತೊಮ್ಮೆ ಉಪಯೋಗಿಸುವಾಗ ಮೇಲಿಂದ ತೊಳೆದು (ಉಜ್ಜದೆ) ಉಪಯೋಗಿಸಿ. ಚಿಟಿಕೆ ಉಪ್ಪು ಹಾಕಿ ತವ ಮೇಲೆ ಉಜ್ಜಿದರೆ ರೊಟ್ಟಿ ಅಥವಾ ದೋಸೆ ಸಲೀಸಾಗಿ ಎದ್ದು ಬರುತ್ತದೆ.

No comments:

Post a Comment