ಅಯ್ಯೋ ಮೊನ್ನೆ ತಾನೆ ಅಕ್ಕಿ ತಂದಿದ್ದೆ ಅಷ್ಟರಲ್ಲಿ ಹುಳ ಆಗಿಬಿಟ್ಟಿದೆ... ಥತ್ತೇರಿ ಸಾರಿಗೆ ನೀನೂ ಉಪ್ಪು ಹಾಕ್ಬಿಟ್ಯಾ, ನಾನೂ ಹಾಕಿದ್ದೆ, ಏನ್ಮಾಡೋದಪ್ಪಾ... ಬೆಂಡೆಕಾಯಿ ಪಲ್ಯ ತಿನ್ನೋದಕ್ಕೇ ಅಸಹ್ಯ ಆಗತ್ತೆ, ಯಪ್ಪಾ ಲೋಳೆ ಲೋಳೆ... ಅಂತೆಲ್ಲಾ ಗೊಣಗಾಡುವವರನ್ನು ನೀವೂ ನೋಡಿರಬಹುದು, ನಾನೂ ನೋಡಿದ್ದೇನೆ. ಗೊಣಗಾಟ ನಿಲ್ಲಿಸಿ, ಕೆಳಗೆ ತಿಳಿಸಿದ ಕೆಲ ಉಪಾಯಗಳನ್ನು ಚಲಾವಣೆಗೆ ತಂದು ನೋಡಿ. ಆಲ್ ದಿ ಬೆಸ್ಟ್
1) ಅಕ್ಕಿ ಡಬ್ಬದ ಒಳಗೆ ಹರಳೆಣ್ಣೆಯನ್ನು ಸವರಿ ಅಕ್ಕಿ ಹಾಕಿಟ್ಟರೆ ಹುಳ ಬರುವುದಿಲ್ಲ.
2) ಅಕ್ಕಿ ಡಬ್ಬದಲ್ಲಿ ಈರುಳ್ಳಿ ಅಥವಾ ಬೇವಿನ ಎಲೆ ಅಥವಾ ಅರಿಶಿಣ ಕೊಂಬುಗಳನ್ನು ಇಟ್ಟರೂ ಹುಳ ಆಗುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಹಸಿ ಕೈಯಿಂದ ಅಕ್ಕಿ ಮುಟ್ಟಬಾರದು.
3) ಸೊಪ್ಪನ್ನು ಬೇಯಿಸುವಾಗ ಮುಚ್ಚಳ ಮುಚ್ಚಬೇಡಿ. ಮುಚ್ಚಿದಾಗ ಅದರ ಬಣ್ಣ ಬದಲಾಗುತ್ತದೆ.
4) ಸ್ವಲ್ಪ ಎಣ್ಣೆಯನ್ನು ಹಚ್ಚಿಕೊಂಡು ತರಕಾರಿಗಳನ್ನು ಹೆಚ್ಚಿದಾಗ ಕೈ ಕಪ್ಪಾಗುವುದಿಲ್ಲ.
5) ತರಕಾರಿ ಹೆಚ್ಚಿ ಕೈ ಕಪ್ಪಾಗಿದ್ದರೆ ನಿಂಬೆ ಹಣ್ಣಿನ ಸಿಪ್ಪೆಯಿಂದ ಕೈಯನ್ನು ಉಜ್ಜಿ ಕೈ ಸ್ವಚ್ಚವಾಗಿ ಮೃದುವಾಗುವುದು.
6) ಬೆಂಡೆಕಾಯಿ ಪಲ್ಯ ಲೋಳೆಯಾಗದಿರಲು ಸ್ವಲ್ಪಎಣ್ಣೆ ಹಾಕಿ ಹುರಿದ ಬಳಿಕ ಹುಣಸೆ ರಸವನ್ನು ಹಾಕಿದಲ್ಲಿ ಪಲ್ಯ ಅಥವಾ ಸಾರು ಲೋಳೆಯಾಗುವುದಿಲ್ಲ.
7) ಪಲ್ಯಕ್ಕೆ ಆಲುಗಡ್ಡೆ ಬೇಯಿಸುವಾಗ ಸ್ವಲ್ಪ ಉಪ್ಪು ಹಾಕಿದರೆ ಸಿಪ್ಪೆ ಸಲೀಸಾಗಿ ಸುಲಿದು ಬರುತ್ತದೆ.
8) ತರಕಾರಿ ಬಾಡಿದ ಹಾಗಿದ್ದರೆ ನೀರಿಗೆ ನಿಂಬೆರಸ ಹಾಕಿ ಅದರಲ್ಲಿ ತರಕಾರಿಗಳನ್ನು 1/2 ಗಂಟೆ ಮುಳುಗಿಸಿಡಿ. ಮತ್ತೆ ಹೊಸದರಂತೆ ಹಾಗುತ್ತದೆ.
9) ಸಲಾಡ್ ಗಳನ್ನು ಮಾಡುವಾಗ ಈರುಳ್ಳಿ, ಸೌತೆಕಾಯಿ, ಟೊಮೆಟೊ ಅಥವಾ ಇತರೇ ತರಕಾರಿಗಳನ್ನು ಹೆಚ್ಚಿ ಫ್ರಿಡ್ಜ್ ನಲ್ಲಿ 1/2 ಗಂಟೆ ಇಟ್ಟು ಉಪಯೋಗಿಸಿದರೆ ರುಚಿ ಹೆಚ್ಚುತದೆ.
10) ಟೀ ಮಾಡುವಾಗ ಸ್ವಲ್ಪ ಏಲಕ್ಕಿ ಪುಡಿ ಹಾಕಿದರೆ ಘಮ್ಮನೆಯ ಚಹಾ ಮತ್ತಷ್ಟು ರುಚಿ ಪಡೆಯುತ್ತದೆ. ಏಲ್ಲಕ್ಕಿ ಉಪಯೋಗಿಸಿದ ಮೇಲೆ ಸಿಪ್ಪೆಯನ್ನು ಬಿಸಾಡುವ ಬದಲು ಟೀ ಡಬ್ಬದಲ್ಲಿ ಹಾಕಿಡಿ.
11) ಸಾರಿನಲ್ಲಿ ಉಪ್ಪು ಜಾಸ್ತಿಯಾದರೆ ಆಲುಗಡ್ಡೆಯ ಚೂರುಗಳನ್ನು ಹಾಕಿ ಬೇಯಿಸಿ. 1/2 ಗಂಟೆಯಾದ ಮೇಲೆ ಮೆಲ್ಲಗೆ ತೆಗೆಯಿರಿ.
12) ಸಾರಿಗೆ ಖಾರ ಜಾಸ್ತಿಯಾದರೆ ಟೊಮೆಟೊ ಹಣ್ಣನ್ನು ಹಾಕಿ ಬೇಯಿಸಿ.
13) ಮಜ್ಜಿಗೆ ತುಂಬಾ ಹುಳಿಯಾದರೆ ಜಾಸ್ತಿ ನೀರು ಹಾಕಿ ಒಂದೆರಡು ಗಂಟೆಗಳ ಕಾಲ ಇಡಿ. ಆಮೇಲೆ ಮೇಲಿನ ತಿಳಿ ನೀರನ್ನು ಚೆಲ್ಲಿದಾಗ ಹುಳಿ ಮಾಯವಾಗಿರುತ್ತದೆ.
14) ದೋಸೆ ಮಾಡುವಾಗ ದೋಸೆ ಕಾವಲಿಗೆ ಕಚ್ಚುತ್ತಿದ್ದರೆ ಒಂದು ಈರುಳ್ಳಿಯನ್ನು 1/2 ಮಾಡಿ ಕಾವಲಿಗೆ ತಿಕ್ಕಿ ದೋಸೆ ಹುಯ್ಯಿರಿ.
15) ತರಕಾರಿ ಬೇಯಿಸುವಾಗ ಸ್ಟೀಲ್ ಪಾತ್ರೆಯಲ್ಲಿ ಬೇಯಿಸಬೇಕು. ಅಲ್ಯುಮಿನಿಯಂದಾದರೆ ತರಕಾರಿ ಕಪ್ಪಾಗುವುದು.
No comments:
Post a Comment