Wednesday, December 9, 2009

ಭಿಡೆ ಬಿಡದಿದ್ದರೆ ಬದುಕೇ ಭಾರ!

ನಮ್ಮನ್ನು ಸಂಪೂರ್ಣ ಹತಾಹತಿಗೊಳಿಸಲು ನಮ್ಮೊಳಗಿರುವ ಒಂದು ಗುಣ ಸಾಕು. ಅದರಲ್ಲೂ ಆ ಗುಣ-ಸಂಕೋಚ- ಎಂದಾದರೆ ಮುಗೀತು. ಕಾಣಾಕಾಣ ಒಬ್ಬನನ್ನು ಮುಗಿಸಲಿಕ್ಕೆ ಒಂದು ಸೌಟು ಸಂಕೋಚ ಸಾಕು. ಬೇಕಾದರೆ ನೋಡಿ ನಮ್ಮೆಲ್ಲ ಪರಿತಪನೆ, ಚಡಪಡಿಕೆ, ಕೊರಗು, ವೇದನೆ, ಹತಾಶೆ, ಖಜ್ಜಾಖೋರತನ, ಅಸಹಾಯಕತೆ, ವಿಷಾದ, ಅಲವತ್ತುಕೊಳ್ಳುವಿಕೆ, ಭಾವ ಭಂಗದ ಹಿಂದುಗಡೆ ಈ ಸಂಕೋಚವೆಂಬ ಹೆಮ್ಮಾರಿ ಕುಳಿತುಕೊಂಡಿದೆ. ತಮಾಷೆಯೆಂದರೆ ನಮಗ್ಯಾರಿಗೂ ಇದು ಹೆಮ್ಮಾರಿಯೆಂದು ಅನಿಸುವುದೇ ಇಲ್ಲ. ಅದಕ್ಕಿಂತ ಹೆಚ್ಚಾಗಿ ಈ ಸಂಕೋಚವನ್ನು ನಾವು `ಸಂಪನ್ನಗುಣ' ಎಂದೇ ಭಾವಿಸಿದ್ದೇವೆ. "ನೋಡು ಆಕೆ ಎಷ್ಟೊಂದು ಒಳ್ಳೆಯವಳು! ಅದೇನು ನಯ, ವಿನಯ? ಅದೇನು ಸಂಕೋಚ? ಅದೇನು ಒಳ್ಳೆಯ ನಡತೆ?" ಎಂದು ಪ್ರಶಂಸಿಸುತ್ತೇವೆ. ಸಂಕೋಚ ಪ್ರವೃತ್ತಿಯನ್ನು ನಮ್ಮ ಒಳ್ಳೆಯ ಗುಣಗಳ ಹರಿವಾಣದಲ್ಲಿಟ್ಟಿರುತ್ತೇವೆ.

ಆದರೆ ನಿಜಕ್ಕೂ ಈ ಸಂಕೋಚವೆಂಬುದು ನಾವಂದುಕೊಂಡಷ್ಟು ಒಳ್ಳೆಯ ಗುಣವಾ? ನಿಜಕ್ಕೂ ಇದು ಸಂಪನ್ನತೆಯಾ? ಸಂಕೋಚಕ್ಕೇಕೆ ಈ ಪರಿ ಮರ್ಯಾದೆ? ಸಂಕೋಚವೆಂಬುದು ಉತ್ತಮತನವಾ? ಈ ಪ್ರಶ್ನೆಗಳನ್ನಿಟ್ಟುಕೊಂಡು ಕುಳಿತರೆ ಈ ಗುಣದಿಂದ ಒಳ್ಳೆಯ ನಿದರ್ಶನಗಳು ಸಿಗುವುದಿಲ್ಲ. ಆದರೂ ನಾವು ಸಂಕೋಚವನ್ನು ಭಾವಕೋಶದಲ್ಲಿ ಭದ್ರವಾಗಿಟ್ಟುಕೊಂಡು ಕಾಲಕಾಲಕ್ಕೆ ಅದನ್ನಿಟ್ಟುಕೊಂಡಿದ್ದಕ್ಕೆ ನಮ್ಮೊಳಗೆ ಖುಷಿ, ಸಮಾಧಾನ ಅನುಭವಿಸುತ್ತಿರುತ್ತೇವೆ.

ಇದು ಕೇವಲ ನಮ್ಮ-ನಿಮ್ಮ ಪಾಡಲ್ಲ. ಮಹಾನ್ ವ್ಯಕ್ತಿಗಳಿಗೂ ಈ ಸಂಕೋಚ ಕಾಡುವುದುಂಟು. ಫ್ರಾಂಕ್ಲಿನ್ ರೂಸ್‌ವೆಲ್ಟ್ ಎಂಬ ಹೆಸರಿನ ಅಮೆರಿಕದ ಅಧ್ಯಕ್ಷನಿದ್ದ. ಆತ ಗಾಲಿಕುರ್ಚಿಯ ಮೇಲೆ ಚಲಿಸುತ್ತಿದ್ದ. ಪ್ರತಿನಿತ್ಯ ಅವನನ್ನು ನೂರಾರು ಮಂದಿ ಭೇಟಿ ಮಾಡುತ್ತಿದ್ದರು. ಅವರು ಹೋಗುವಾಗ ಗಾಲಿಕುರ್ಚಿಯಿಂದ ಮೇಲೆದ್ದು ಕೈಕುಲುಕಲು ಬಯಸುತ್ತಿದ್ದ. ಮೇಲೆದ್ದು ಷೇಕ್ ಹ್ಯಾಂಡ್ ಮಾಡದಿದ್ದರೆ ತನ್ನನ್ನು ತಪ್ಪಾಗಿ ಭಾವಿಸಬಹುದೆಂಬ ಸಂಕೋಚ ರೂಸ್‌ವೆಲ್ಟ್‌ನನ್ನು ಕಾಡುತ್ತಿತ್ತು. ಮೂರ್ನಾಲ್ಕು ಬಾರಿ ಗಾಲಿಕುರ್ಚಿಯಿಂದ ಮೇಲೇಳುವಾಗ ಬಿದ್ದುಬಿಟ್ಟಿದ್ದ. ಒಮ್ಮೆಯಂತೂ ಮೂಗು ಜಜ್ಜಿ ರಕ್ತ ಬಂದಿತ್ತು. ಈ ಸಂಕೋಚ ರೂಸ್‌ವೆಲ್ಟ್‌ನನ್ನು ತಿಂಗಳಾನುಗಟ್ಟಲೆ ಮಲಗಿಸಿಬಿಟ್ಟಿತ್ತು. ಆದರೂ ಅವನು ಸುಮ್ಮನಿರುತ್ತಿರಲಿಲ್ಲ. ಹಾಗಂತ ಆತನೇ ಬರೆದುಕೊಂಡಿದ್ದಾನೆ.

ಯಾವನೋ ಸ್ನೇಹಿತ ಬಂದು ಹಣ ಕೇಳುತ್ತಾನೆ. ನಮ್ಮ ಹತ್ರಾನೇ ದುಡ್ಡು ಇರೊಲ್ಲ. ಆದರೂ ಹಾಗಂತ ಹೇಳುವುದಿಲ್ಲ. ಬೇರೆಯವರ ಹತ್ತಿರ ಸಾಲ ಮಾಡಿ ತಂದು ಕೊಡುತ್ತೇವೆ. ಸ್ನೇಹಿತ ಹೇಳಿದ ದಿನಕ್ಕೆ ಹಣ ವಾಪಸ್ ಕೊಡುವುದಿಲ್ಲ. ನಾವು ಯಾರಿಂದ ಹಣ ತಂದಿರುತ್ತೇವೋ ಆತ ವಾಪಸ್ ಕೊಡುವಂತೆ ಪೀಡಿಸುತ್ತಾನೆ. ಆದರೂ ಸ್ನೇಹಿತನಲ್ಲಿ ಹೋಗಿ ಹಣ ಕೇಳುವುದಕ್ಕೆ ಸಂಕೋಚ. ಹಣ ವಾಪಸು ಕೊಡು ಅಂತ ಹೇಳಿದರೆ ಆತ ಬೇಸರಿಸಿಕೊಂಡರೆ, ಸಂಬಂಧ ಹಾಳಾದರೆ ಅಂತ ಯೋಚಿಸುತ್ತೇವೆಯೇ ಹೊರತು, ಕೊಟ್ಟ ಹಣ ಕೊಡು ಅಂತ ಖಡಾಖಂಡಿತವಾಗಿ ಹೇಳುವುದಿಲ್ಲ. ಈ ಸಂಕೋಚ ಬಂದು ಬಾಯನ್ನೇ ಮುಚ್ಚಿಹಾಕಿದರೂ ಸುಮ್ಮನಿರುತ್ತೇವೆ. ಅದರಿಂದ ಬರುವ ಎಲ್ಲ ತೊಂದರೆಗಳನ್ನು ಅನುಭವಿಸುತ್ತೇವೆ. ಆದರೂ ಗಪ್ಪಂತ ಕುಳಿತಿರುತ್ತೇವೆ. ದುಡ್ಡು ವಾಪಸ್ ಬಂದಿಲ್ಲ ಎಂದು ಕೊನೆತನಕ ಕದಕದಿಸುತ್ತೇವೆಯೇ ಹೊರತು ಕೇಳಲು ಮುಂದಾಗುವುದೇ ಇಲ್ಲ.


ಏನೇ ಹೇಳಿ ಸಂಕೋಚ ನಾವಂದುಕೊಂಡಷ್ಟು ಒಳ್ಳೆಯದಲ್ಲ.

No comments:

Post a Comment