Tuesday, January 25, 2011
ಆಚರಿಸಿ ನೋಡಿ:ತೂಕ ಇಳಿಸಿ
ಬೆಳಗ್ಗೆ ಐದಕ್ಕೆ ಎದ್ದು ವಾಕಿಂಗೋ, ಜಾಗಿಂಗೋ ಮಾಡಬೇಕು. ಎದ್ದು ಕಾಣುತ್ತಿರುವ ಹೊಟ್ಟೆಯನ್ನು ಇಳಿಸಬೇಕು. ಒಂದೈದು ಕೇಜಿ ತೂಕ ಕಡಿಮೆಮಾಡಿಕೊಳ್ಳಬೇಕು..ಹಾಗಾದರೆ ಸುಲಭ ವಿಧಾನ ಡಯೆಟ್ ಪ್ರೋಗ್ರಾo
ಇದು ಒಂದು ವಾರದ ಕಾರ್ಯಕ್ರಮ. ನಮ್ಮ ದೇಹದ ಸಾಮಾನ್ಯ ಚಟುವಟಿಕೆಗಳಿಗೆ ಬೇಕಾಗುವ ಶಕ್ತಿಗಿಂತ ಕಡಿಮೆ ಶಕ್ತಿಯನ್ನು ಆಹಾರದ ಮೂಲಕ ತೆಗೆದುಕೊಳ್ಳುವಂತೆ ಇದನ್ನು ರೂಪಿಸಲಾಗಿದೆ. ಅಂದರೆ ಶರೀರದಲ್ಲಿ ಸಂಚಯವಾಗಿರುವ ಹೆಚ್ಚಿನ ಶಕ್ತಿ ವ್ಯಯಿಸಲ್ಪಡುತ್ತದೆ. ಆದರೆ ಎಂದೂ ಹೊಟ್ಟೆಹಸಿಯದಂತೆ ರೂಪಿಸಿರುವುದೇ ಇದರ ವಿಶೇಷ. ಒಂದು ವಾರ ಪೂರ್ತಿ ಈ ಕೆಳಗೆ ತಿಳಿಸಿರುವ ಆಹಾರವನ್ನು ಮಾತ್ರ ಸೇವಿಸಬೇಕು. ದಿನಕ್ಕೆ ಎರಡು ಲೀಟರ್ ಮೇಲ್ಪಟ್ಟು ನೀರು ಕುಡಿಯಬೇಕು.
ಮೊದಲನೇ ದಿನ : ಬಾಳೇಹಣ್ಣನ್ನು ಬಿಟ್ಟು ಯಾವುದೇ ಹಣ್ಣನ್ನು ಮನಸೋ ಇಚ್ಚೆ ಎಷ್ಟು ಬೇಕಾದರೂ ತಿನ್ನಿರಿ. ನೀರಿನಂಶ ಇರುವ ಕರ್ಬೂಜ, ಕಲ್ಲಂಗಡಿಯನ್ನು ತಿಂದರೆ ಒಳ್ಳೆಯದು. ಮೊದಲದಿನದ ಈ ಯಜ್ಞ ಮುಂದಿನ ದಿನಗಳಿಗೆ ನಿಮ್ಮ ದೇಹವನ್ನು ತಯಾರು ಮಾಡುತ್ತದೆ. ಹಣ್ಣುಗಳು ನಮ್ಮ ದೇಹದ ಎಲ್ಲಾ ಚಟುವಟಿಕೆಗಳಿಗೆ ಅಗತ್ಯವಾದ ಶಕ್ತಿಯನ್ನು ಕೊಡಬಲ್ಲುದು.
ಎರಡನೇ ದಿನ: ಈದಿನ ಯಾವುದೇ ತರಕಾರಿಯನ್ನು ಹಸಿಯಾಗಿ ಅಥವಾ ಬೇಯಿಸಿ ತಿನ್ನಬಹುದು. ಸ್ವಲ್ಪವೇ ಉಪ್ಪನ್ನು ಬಳಸಬಹುದು. ತೆಂಗಿನಕಾಯಿ ಹಾಗೂ ಎಣ್ಣೆಯನ್ನು ದೂರವಿಡಿರಿ. ಬೆಳಗಿನ ಉಪಹಾರಕ್ಕೆ ಬೇಯಿಸಿದ ಆಲೂಗಡ್ಡೆಯನ್ನು ಸೇವಿಸಿರಿ. ಕಾರ್ಬೋಹೈಡ್ರೇಟನ್ನು ಆಲೂಗಡ್ಡೆಯ ಮೂಲಕ ಸೇವಿಸುವುದರಿಂದ ದೇಹಕ್ಕೆ ಬೇಕಾದ ಚೈತನ್ಯವು ಬರುವುದು. ತರಕಾರಿಗಳು ದೇಹಕ್ಕೆ ಬೇಕಾದ ನಾರಿನಂಶವನ್ನು ಕೊಡುತ್ತವೆ. ಕೊಬ್ಬು ಇಲ್ಲದೇ ಇರುವುದರಿಂದ ಆರೋಗ್ಯ ವೃದ್ಧಿಸುವುದು.
ಮೂರನೆಯ ದಿನ: ಇವತ್ತು ಹಣ್ಣು ಹಾಗೂ ತರಕಾರಿಗಳ ಮಿಶ್ರಣ. ಆದರೆ, ಇವತ್ತು ಆಲೂಗಡ್ಡೆ ಬೇಡ ಏಕೆಂದರೆ ಕಾರ್ಬೋಹೈಡ್ರೇಟುಗಳು ಹಣ್ಣುಗಳಿಂದಲೇ ಸಿಗುತ್ತವೆ. ಅಗತ್ಯಕ್ಕಿಂತ ಹೆಚ್ಚಾದ ಶಕ್ತಿ (ಕ್ಯಾಲರಿ)ಗಳನ್ನು ಉರಿಸಲು ನಿಮ್ಮ ದೇಹ ಈಗ ಸಜ್ಜಾಗಿದೆ. ಸಿಕ್ಕಿದ್ದು ತಿಂದುಬಿಡಬೇಕೆಂಬ ಲಾಲಸೆ ನಿಮ್ಮಲ್ಲಿ ಬರುವುದು ಸಹಜ, ಆದರೆ ತಡೆದುಕೊಳ್ಳಿ ಪ್ಲೀಜ್.
ನಾಲ್ಕನೆಯ ದಿನ:ಎಂಟು ಬಾಳೆಹಣ್ಣನ್ನು ತಿಂದು ಮೂರು ಲೋಟ ಹಾಲನ್ನು ಹುಡಿಯಿರಿ. ಅದರ ಜೊತೆಗೆ ಒಂದು ಬಟ್ಟಲು ತರಕಾರಿ ಸೂಪನ್ನು ಕುಡಿಯಬಹುದು. ಮೊದಲ ಮೂರು ದಿನಗಳು ದೇಹಕ್ಕೆ ದಕ್ಕದ ಸೋಡಿಯಂ ಹಾಗೂ ಪೊಟಾಶಿಯಂಗಳನ್ನು ಸರಿತೂಗಿಸುವುದಕ್ಕಾಗಿ ಬಾಳೇಹಣ್ಣುಗಳು. ಇವತ್ತು ಕಳೆಯುವುದು ಸುಲಭ. ಆಹಾರ ಚಾಪಲ್ಯ ಕ್ರಮೇಣ ಕಡಮೆಯಾಗುತ್ತಿರುವುದು ನಿಮ್ಮ ಅರಿವಾಗೆ ಬಂದಿದೆ. ಗುಡ್. ಎಲ್ಲಾ ಬಾಳೇಹಣ್ಣುಗಳನ್ನೂ ತಿನ್ನಲು ಆಗದೇ ಹೋಗಬಹುದು! ಪರವಾಗಿಲ್ಲ.
ಐದನೇ ದಿನ: ಒಂದು ಬಟ್ಟಲು ಅನ್ನ ಹಾಗೂ ಆರು ಟೊಮೇಟೊಗಳನ್ನು ತಿನ್ನಿರಿ. ದೇಹದಲ್ಲಿ ಹೆಚ್ಚು ಯೂರಿಕ್ ಆಸಿಡ್ ಉತ್ಪತ್ತಿಯಾಗುವ ಕಾರಣ ಮೂರು ಲೀಟರ್ ನೀರನ್ನು ಕುಡಿಯಬೇಕು. ಕಾರ್ಬೋಹೈಡ್ರೇಟ್‌ಗಳಿಗಾಗಿ ಅನ್ನ ಹಾಗೂ ಜೀರ್ಣ ಕ್ರಿಯೆಗಾಗಿ ಟೊಮೇಟೋಗಳು. ಹೆಚ್ಚು ನೀರನ್ನು ಕುಡಿಯುವುದರಿಂದ ದೇಹವೂ ಶುಧ್ಧಿಯಾಗುತ್ತದೆ.
ಆರನೇ ದಿನ: ಒಂದು ಬಟ್ಟಲು ಅನ್ನದೊಂದಿಗೆ ಇಷ್ಟಬಂದ ತರಕಾರಿಗಳನ್ನು ಬೇಯಿಸಿ ಹಾಗೂ ಹಸಿಯಾಗಿ ತಿನ್ನಿರಿ. ಈದಿನ ತರಕಾರಿಗಳಿಂದ ವಿಟಮಿನ್ ಹಾಗೂ ನಾರಿನಂಶ, ಮತ್ತು ಅನ್ನದಿಂದ ಕಾರ್ಬೋಹೈಡ್ರೇಟ್‌ಗಳು ದೊರೆಯುತ್ತವೆ.
ಏಳನೇ ದಿನ: ಒಂದು ಬಟ್ಟಲು ಅನ್ನ, ಹಣ್ಣಿನ ಜೂಸ್, ಹಾಗೂ ತರಕಾರಿಗಳನ್ನು ತಿನ್ನಿರಿ.
ಫಲಿತಾಂಶ: ನಿಮ್ಮ ದೇಹ ಶುದ್ಧಿಯಾಗಿರುವುದರೊಂದಿಗೆ ನಾಲ್ಕೈದು ಕೇಜಿಯಾದರೂ ಕಡಿಮೆಯಾಗಿರುತ್ತೀರಿ. ಬಾಯಿ ಚಪಲ ಕಡಿಮೆಯಾಗಿರುತ್ತದೆ. ಮಸಾಲೆ ಹಾಕಿದ ಸಾರು, ಹುಳಿಗಳನ್ನು ತಿನ್ನಲು ಮನಸ್ಸು ಹಿಂಜರಿಯುತ್ತದೆ. ಈ ಪ್ರೋಗ್ರಾಮನ್ನು ಆಗಾಗ ಮಾಡಬಹುದು. ಪುನರಾವರ್ತಿಸುವ ಮೊದಲು ಎರಡು ಡಯಟ್ ಪ್ರೊಗ್ರಾಂಗಳ ನಡುವೆ ನಾಲ್ಕು ದಿನ ಮಧ್ಯಂತರ ಕೊಡುವುದು ಉತ್ತಮ.
ಮೊದಲ ದಿನ ಕಳೆಯುವುದು ಅಷ್ಟೇನೂ ಕಷ್ಟವಲ್ಲ. ಎರಡನೇ ಹಾಗೂ ಮೂರನೇ ದಿನ ಕಳೆಯುವುದು ಸ್ವಲ್ಪ ಕಷ್ಟ. ಕೊನೆಯ ನಾಲ್ಕು ದಿನಗಳು ಕಳೆಯುವುದು ಸುಲಭ. ಪ್ರತೀ ಸಾರಿ ಕಳೆದುಕೊಂಡ ದೇಹ ತೂಕ ಕ್ರಮೇಣ ಮತ್ತೆ ಬಂದುಬಿಡುತ್ತದೆ. ಆದ್ದರಿಂದ ಡಯೆಟ್ ವಾರ ಮುಗಿದ ನಂತರವೂ ಆಹಾರದ ಮೇಲೆ ಹಿಡಿತವಿದ್ದರೆ ಒಳ್ಳೆಯದು. ಮುಂದೆ ಮನಸ್ಸಾದಾಗ ಪೂರ್ತಿ ವಾರ ಮಾಡಲು ಸಾಧ್ಯವಿಲ್ಲದಿದ್ದರೂ ಒಂದೋ ಎರಡೋ ದಿನಗಳು ಬೇಕಾದರೂ ಮಾಡಬಹುದು.
Subscribe to:
Post Comments (Atom)
ನಾನು ಈಗ ಡಯಟ್ ಶುರು ಮಾಡುತ್ತೆನೆ
ReplyDelete