Monday, January 24, 2011

ಮನುಷ್ಯ ಸಂಬಂಧ

ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಅಂತ ಹಿರಿಯರು ಹೇಳಿದ್ದು ಬರೇ ಇದೇ ಕಾರಣಕ್ಕೆ. ಒಂದು ಮಾತಿನ ಮೇಲೆಯೇ ನಮ್ಮ ನಡುವಿನ ಸಂಬಂಧ ನಿಂತಿದೆ. ಇದು ಅತ್ಯಂತ ಪವಿತ್ರವೂ, ಕುಸುಮದಷ್ಟು ಕೋಮಲವೂ ಆದ ಬಂಧ. ಪ್ರೀತಿ ಎಂಬುದು ಬರೇ ಇನ್‌ಕಮಿಂಗ್ ಎಂದಾದರೆ ಬದುಕಿಗೆ ಅರ್ಥವಿಲ್ಲ. ಔಟ್ ಗೋಯಿಂಗ್ ಕೂಡ ಇದ್ದರೆ, ಅಂದರೆ ಪ್ರೀತಿಯು ಕೊಟ್ಟು ತೆಗೆದುಕೊಳ್ಳುವಂತಿದ್ದರೆ ಅದಕ್ಕಿಂತ ಸುಮಧುರ ಸುಂದರ ಜೀವನ ಮತ್ತೊಂದಿಲ್ಲ.

ಮಾತು ಮನೆ ಕೆಡಿಸುತ್ತದೆ ಎಂಬುದು ಎಷ್ಟು ಸತ್ಯವೋ, ಮಾತು ಮನವನ್ನೂ ಕೆಡಿಸಬಲ್ಲುದು. ಈ ಪ್ರೀತಿ ಮತ್ತು ಮಾತು ಎಂಬುದು ಒಂದಕ್ಕೊಂದು ಪೂರಕವಾಗಿದ್ದರೆ ಬದುಕು ಚೆನ್ನ ಚೆನ್ನ. ಈ ಪ್ರೀತಿಯ ಬಂಧಕ್ಕೆ ಆಘಾತವಾಗುವುದು ಯಾವಾಗ? ಮಾತು ತಪ್ಪಿದಾಗ ಅಥವಾ ತಪ್ಪು ಮಾತು ನುಡಿದಾಗ! ಅಂದರೆ ಮಾತಿಗೂ ಮನಸಿಗೂ ನೇರಾನೇರ ಸಂಬಂಧ.

ಹೌದು. ಒಬ್ಬರ ಮೇಲೆ ಪೂರ್ತಿಯಾಗಿ ಪ್ರೀತಿಯ ಧಾರೆ ಎರೆಯುತ್ತೇವೆ. ಒಡಹುಟ್ಟಿದ ತಂಗಿ ಇಲ್ಲ ಅಂತ, ಪಕ್ಕದ ಮನೆಯವರೋ, ಅಥವಾ ಜತೆಯಲ್ಲಿ ಕೆಲಸ ಮಾಡುತ್ತಿರುವವರನ್ನೋ ತಂಗಿಯಾಗಿ ಸ್ವೀಕರಿಸಿ, ಅವರಿಗೆ ಬಂಧುವಾಗಿ, ಅಣ್ಣನಾಗಿ, ಮಮತೆಯನ್ನು ಧಾರೆಯೆರೆಯುತ್ತೇವೆ. ಅಂಥವರಿಗೆ ಪ್ರೀತಿ ತೋರಿಸದಿದ್ದರೂ ಪರವಾಗಿಲ್ಲ, ದ್ವೇಷ ಮಾಡಲು ಯಾವುದಾದರೂ ಕಾರಣಗಳಿರುತ್ತವೆಯೇ? ಖಂಡಿತಾ ಇರುವುದಿಲ್ಲ. ಹಾಗಿರುವುದರಿಂದ ಅವರಿಗೆ ನಮ್ಮ ಸೋದರ ಪ್ರೀತಿಯನ್ನು ಧಾರೆಯೆರೆಯುತ್ತೇವೆ.

ಆದರೆ ತಪ್ಪು ಹಾದಿ ತುಳಿದಾಗ ತಿದ್ದಿ ತಿಳಿಹೇಳುವುದನ್ನೇ ದಬ್ಬಾಳಿಕೆ, ಶೋಷಣೆ ಅಂತ ಅವರು ತಿಳಿದುಕೊಂಡರೆ? ವಿನಾಕಾರಣ ಕೋಪಿಸಿಕೊಂಡು, ಬೆನ್ನಿಗೆ ಚೂರಿ ಹಾಕಿದರೆ? ನಿನ್ನಿಂದಾಗಿ ನನ್ನ ಜೀವನ ನರಕವಾಯ್ತು ಅಂತ ವೃಥಾರೋಪ ಮಾಡಿದರೆ? ಬೇರೆಯವರ ಮಾತು ಕೇಳಿ ನನ್ನನ್ನು ತುಳಿಯಲು ನೋಡ್ತಾ ಇದ್ದೀಯಾ ಅಂತ ಕನಸು ಮನಸಿನಲ್ಲೂ ಯೋಚಿಸದ ಆರೋಪ ಮಾಡಿದರೆ? ನಿರ್ವ್ಯಾಜ, ನಿಷ್ಕಳಂಕ, ಫಲಾಪೇಕ್ಷೆಯಿಲ್ಲದ, ನಿಸ್ವಾರ್ಥ ಪ್ರೀತಿಯ ಹೊಳೆ ಹರಿಸಿದವರ ಪಾಡು ಯೋಚಿಸಿ ನೋಡಿ!

ಆದರೂ, ಏನೂ ತಪ್ಪು ಮಾಡದೇ ಇದ್ದಾಗ, ಇನ್ನೊಬ್ಬರಿಗೆ ಯಾವುದೇ ರೀತಿಯಲ್ಲೂ ಕೇಡು ಬಯಸದೇ ಇದ್ದರೂ, ‘ನನ್ನನ್ನು ತುಳಿಯಲು ನೋಡ್ತಾ ಇದ್ದೀಯಾ’ ಎಂಬ ಆರೋಪ ಬಂದಾಗ, ಮಾತು ಮೌನವಾಗುತ್ತದೆ, ಮನಸ್ಸು ಮುರಿಯುತ್ತದೆ, ಹೃದಯ ಭಾರವಾಗುತ್ತದೆ. ಈ ಸಂಬಂಧಗಳ ಬಗೆಗೇ ಒಂದು ರೀತಿಯ ಆತಂಕವೂ ಒಡಮೂಡುತ್ತದೆ.

No comments:

Post a Comment