Tuesday, January 25, 2011

ಉತ್ತಮ ಆರೋಗ್ಯಕ್ಕಾಗಿ ಇವುಗಳನ್ನು ಮಾಡಬೇಡಿ


ಉತ್ತಮ ಆರೋಗ್ಯಕ್ಕಾಗಿ ಏನೇನು ಮಾಡಬೇಕೆಂದು ಅನೇಕರು ತಜ್ಞರದೋ ಅಥವಾ ವೈದ್ಯರದೋ ಸಲಹೆಗಳನ್ನು ಪಡೆದಿರುತ್ತಾರೆ. ಅವುಗಳನ್ನು ಚಾಚೂತಪ್ಪದೆ ಅನುಸರಿಸುತ್ತಲೂ ಇರುತ್ತಾರೆ. ಆದರೂ ಒಂದೊಂದು ಬಾರಿ ಆರೋಗ್ಯ ಕೈಕೊಡುತ್ತಿರುತ್ತದೆ. ಏಕೆಂದರೆ, ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಏನೇನು ಮಾಡಬೇಕೆಂದು ಗೊತ್ತಿರುತ್ತದೆ. ಆದರೆ, ಏನೇನು ಮಾಡಬಾರದೆಂದು ಗೊತ್ತಿರುವುದಿಲ್ಲ ಅಥವಾ ಅದರ ಬಗ್ಗೆ ಸ್ಪಷ್ಟ ಕಲ್ಪನೆ ಇರುವುದಿಲ್ಲ.

ಸಮತೂಕದ ಆಹಾರ ಸೇವಿಸಿದರೂ ಕೆಲ ಅಂಶಗಳನ್ನು ಗಮನದಲ್ಲಿರಿಸುವುದು ಅಗತ್ಯ. ಅದರಲ್ಲಿಯೂ ಮಧ್ಯಾಹ್ನದ ಅಥವಾ ರಾತ್ರಿ ಊಟವಾದ ಮೇಲೆ ಕೆಲ ನಿಯಮಗಳನ್ನು ಅಥವಾ ಕ್ರಮಗಳನ್ನು ಅನುಸರಿಸಿದರೆ ಯಾವುದೇ ರೋಗಗಳು ಅನಾವಶ್ಯಕವಾಗಿ ಬಾಧಿಸದಂತೆ ತಡೆಗಟ್ಟಲು ಸಾಧ್ಯ.

ಊಟವಾದ ತಕ್ಷಣ ಈ ಕೆಳಗಿನ ಏಳು ರೂಢಿಗಳ ಬಗ್ಗೆ ಗಮನವಿರಲಿ:

1) ಸಿಗರೇಟ್ ಸೇದಬೇಡಿ : ಇದು ಯಾವುದೋ ವೈದ್ಯರು ಹೇಳಿದ್ದಲ್ಲ. ಸಾಕಷ್ಟು ಪರೀಕ್ಷೆಗಳನ್ನು ಮಾಡಿದ ಮೇಲೆ ದೃಢಪಟ್ಟಿದ್ದು. ಊಟವಾದ ಮೇಲೆ ಒಂದು ಸಿಗರೇಟು ಸೇದಿದರೆ ಅದು ಹತ್ತು ಸಿಗರೇಟು ಸೇದಿದ್ದಕ್ಕೆ ಸಮ. ಇದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು.

2) ಹಣ್ಣು ತಿನ್ನಬೇಡಿ : ಊಟವಾದ ಮೇಲೆ ಹಣ್ಣು ತಿನ್ನುವುದೇನೋ ಸರಿ, ಆದರೆ ತಕ್ಷಣ ತಿನ್ನಬೇಡಿ. ಸುಮಾರು ಅರ್ಧ ಗಂಟೆ ನಂತರ ಹಣ್ಣು ತಿನ್ನುವುದು ಶ್ರೇಯಸ್ಕರ. ತಕ್ಷಣ ತಿಂದರೆ ಹೊಟ್ಟೆಯಲ್ಲಿ ಗಾಳಿ ತುಂಬಿಕೊಳ್ಳುತ್ತದೆ.

3) ಚಹಾ ಕುಡಿಯಬೇಡಿ : ಚಹಾಎಲೆಗಳಲ್ಲಿ ಹೆಚ್ಚಿನ ಪ್ರಮಾಣದ ಆಮ್ಲ ಇರುವುದರಿಂದ ಆಹಾರದಲ್ಲಿನ ಪ್ರೊಟೀನ್ ಮತ್ತಷ್ಟು ಗಟ್ಟಿಯಾಗಿ ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಚಹಾ ಅಥವಾ ಕಾಫಿಗಳ ಕಡಿಮೆ ಸೇವನೆ ಆರೋಗ್ಯಕ್ಕೆ ಉತ್ತಮ.

4) ಬೆಲ್ಟ್ ಸಡಿಲುಗೊಳಿಸಬೇಡಿ : ಅನೇಕರಿಗೆ ಈ ಚಟವಿರುತ್ತದೆ. ಯರ್ರಾಬಿರ್ರಿ ಊಟ ಮಾಡುವುದು ನಂತರ ಟೊಂಕಪಟ್ಟಿ ಸಡಿಲಿಸಿಕೊಳ್ಳುವುದು. ಇದು ಖಂಡಿತ ಒಳ್ಳೆಯದಲ್ಲ. ಸಡಿಲಿಸಿಕೊಂಡರೆ ಕರುಳು ಸರಾಗವಾಗಿ ತಿರುಚಿಕೊಳ್ಳುವ ಸಾಧ್ಯತೆ ಹೆಚ್ಚು. ಆದ್ದರಿಂದ, ಊಟ ಪ್ರಾರಂಭಿಸುವ ಮೊದಲೇ ಟೊಂಕಪಟ್ಟಿಯನ್ನು ಸಡಿಲಿಸಿಕೊಳ್ಳುವುದು ಉತ್ತಮ. ಅದಕ್ಕೂ ಉತ್ತಮವೆಂದರೆ, ಹೊಟ್ಟೆಬಿರಿಯುವಂತೆ ತಿನ್ನದಿರುವುದು.

5) ಸ್ನಾನ ಮಾಡಬೇಡಿ : ಊಟವಾದ ತಕ್ಷಣ ಸ್ನಾನ ಮಾಡಿದರೆ ಕೈಕಾಲು ಮತ್ತಿತರ ದೇಹಭಾಗದಲ್ಲಿ ರಕ್ತ ಸಂಚಾರ ವೃದ್ಧಿಯಾಗಿ ಹೊಟ್ಟೆಭಾಗದಲ್ಲಿ ಕಡಿಮೆಯಾಗುತ್ತದೆ. ಇದರಿಂದ ಜೀರ್ಣಕ್ರಿಯೆ ಕುಂಠಿತವಾಗುವ ಸಾಧ್ಯತೆ ಹೆಚ್ಚು.

6) ಅಡ್ಡಾಡಬೇಡಿ : ರಾತ್ರಿ ಊಟವಾದಕೂಡಲೆ ಸ್ವಲ್ಪ ವಾಕ್ ಹೋಗುವುದು ದೇಹಕ್ಕೆ ಒಳ್ಳೆಯದೆಂಬ ತಿಳಿವಳಿಕೆ ಅನೇಕರಲ್ಲಿದೆ. ಆದರೆ ಇದು ಒಳ್ಳೆಯದಲ್ಲ ಎಂಬುದು ತಜ್ಞರ ಅಭಿಮತ. ಕೂಡಲೆ ವಾಕ್ ಹೊರಟರೆ ನಾವು ತಿಂದ ಆಹಾರದಲ್ಲಿನ ಪೋಷಕಾಂಷ ರಕ್ತಗತವಾಗಲು ಕಷ್ಟವಾಗುತ್ತದೆ. ಅಲ್ಪಕಾಲ ವಿರಾಮ ಪಡೆದು ವಾಕ್ ಹೋಗುವುದು ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ.

7) ಮಲಗಬೇಡಿ : ಊಟವಾದ ಕೂಡಲೆ ಮಲಗುವುದು ಸುತಾರಾಂ ನಿಷಿದ್ಧ. ತಿಂದ ಆಹಾರ ಸರಿಯಾಗಿ ಜೀರ್ಣವಾಗದೇ ಗ್ಯಾಸ್ಟ್ರಿಕ್ ತೊಂದರೆ ಕಾಣಿಸಿಕೊಳ್ಳಬಹುದು ಅಥವಾ ಕರುಳಿಗೆ ಸೋಂಕು ಕೂಡ ತಗಲಬಹುದು. ಮತ್ತೊಂದು ಅಡ್ಡಪರಿಣಾಮವೆಂದರೆ, ಕೂಡಲೆ ಮಲಗಿದರೆ ತಿಂದ ಆಹಾರ ಉಲ್ಟಾ ಹೊಡೆದು ವಾಂತಿಯಾಗಲೂಬಹುದು.

No comments:

Post a Comment