Tuesday, January 25, 2011

ನಗುಮೊಗದ ಗುಟ್ಟು


ಮಧ್ಯಾಹ್ನದ ಊಟವಾಗುತ್ತಿದ್ದಂತೆ ದುಡಿಯುವ ಮನಸ್ಸು ಹಿಂದೇಟು ಹಾಕಲು ಪ್ರಾರಂಭಿಸುತ್ತದೆ, ಕಣ್ಣು ಎಳೆಯಲು ಶುರುವಾಗುತ್ತದೆ. ಏನೋ ಒಂಥರಾ ಸುಸ್ತು. ಇದೇ ಸಮಯದಲ್ಲಿ ಹತ್ತೇಹತ್ತು ನಿಮಿಷ ಸುಮ್ಮನೆ ಕಣ್ಣು ಮುಚ್ಚಿ ಒಂದು ಜೋಂಪು ಎಳೆದರೆ ಮತ್ತೆ ಮನಸ್ಸಿನಲ್ಲಿ ಉಲ್ಲಾಸದ ಹೂಮಳೆ.

ಬೆಳ್ಳಂಬೆಳಿಗ್ಗೆ ಸೂರ್ಯ ಇನ್ನೂ ಕಣ್ಣು ಉಜ್ಜಿಕೊಳ್ಳುತ್ತಿರುವ ಹೊತ್ತಿನಲ್ಲೇ ಎದ್ದು ಕರಾಗ್ರೇ ವಸತೇ ಲಕ್ಷ್ಮಿ ಹೇಳಿ, ಅಂಗಳಕ್ಕೆ ಥಳಿ ರಂಗೋಲಿ ಹಾಕಿ, ಸರಸರ ಕಸಗುಡಿಸಿ, ಮಕ್ಕಳಿಗೆಲ್ಲ ಹಾಲು ಕೊಟ್ಟು, ಸ್ನಾನ ಮಾಡಿಸಿ ತಿಂಡಿ ಕೊಟ್ಟು, ಬಾಯಲ್ಲೊಂದಿಷ್ಟು ತುರುಕಿ, ಡಬ್ಬಿಗೆ ಹಾಕಿ, ಶಾಲೆಗೆ ಕಳುಹಿಸಿ, ತಾನೂ ಸ್ನಾನ ಪೂಜೆ ಪುನಸ್ಕಾರ ಮಾಡಿ, ಹೊಟ್ಟೆ ಪೂಜೆಯನ್ನೂ ಮಾಡಿ, ಮಧ್ಯಾಹ್ನದ ಅಡುಗೆ ಊಟ ಮುಗಿಸಿ, ಪಾತ್ರೆ ತೊಳೆದು, ಬಟ್ಟೆ ಒಗೆದು ಸಾಯಂಕಾಲ ಮತ್ತೆ ಸೂರ್ಯ ಕೆಂಪೇರುವ ಹೊತ್ತಿನಲ್ಲಿ ಅಮ್ಮ ಆಗಲಿ, ಹೆಂಡತಿಯಾಗಲಿ ಮುಖ ತೊಳೆದು, ಬೇರೆ ಸೀರೆಯುಟ್ಟು, ಹೂಮುಡಿದು ನಗುಮೊಗದಿಂದಲೇ ಮಕ್ಕಳನ್ನು, ಗಂಡನನ್ನು ಬರಮಾಡಿಕೊಳ್ಳುತ್ತಾಳೆ.

ಉಸ್ಸಪ್ಪ!

ಈ ಮೇಲಿನ ಪ್ಯಾರಾ ಓದಿ, ಮನೆಯಲ್ಲಿ ಬಿಡುಬಿಡದೆ ಆ ಹೆಣ್ಣು ದುಡಿಯುವ ವೈಖರಿ ನೋಡಿ ನಿಮಗೆ ಸುಸ್ತಾಗಿರಬಹುದು. ಆದರೆ, ಆ ಮಮತಾಮಯಿ ಎಂದೂ ಸುಸ್ತಾಗುವುದಿಲ್ಲ. ಆಕೆಯಲ್ಲಿ ಅಷ್ಟೊಂದು ಎನರ್ಜಿ ಇರುತ್ತಾ ಅಂತ ಆಶ್ಚರ್ಯಪಡಬೇಡಿ. ದುಡಿದು ದುಡಿದು ಆಕೆಯೂ ದಣಿದಿರುತ್ತಾಳೆ. ಆದರೆ, ಮಧ್ಯಾಹ್ನ ಊಟದ ನಂತರ ಸಣ್ಣದೊಂದು ಜೊಂಪು ಹೊಡೆದು ಎದ್ದಿರುತ್ತಾಳೆ ನೋಡಿ ಚಟುವಟಿಕೆಯ ಚಿಲುಮೆಯಾಗಿಬಿಡುತ್ತಾಳೆ. ಇದೇ ಆಕೆಯ ನಗುಮೊಗದ, ಯಾವತ್ತೂ ಚಟುವಟಿಕೆಯಲ್ಲಿರುವ ಗುಟ್ಟು!

No comments:

Post a Comment