Monday, December 13, 2010

ರೋಗಗಳ ಅಡಗುದಾಣ ಹೊಟ್ಟೆಗೆ ವಿಶ್ರಾಂತಿ



ದೇಹದ ಯೋಗಕ್ಷೇಮದ ಬಗ್ಗೆ ಕಾಳಜಿ ಉಳ್ಳವರು ನಿಯಮಿತವಾಗಿ ಮತ್ತು ನಿಷ್ಠೆಯಿಂದ ಉಪವಾಸ ಮಾಡುವುದರಿಂದಾಗುವ ದೇಹದ ಆರೋಗ್ಯದ ಮೇಲಾಗುವ ಪರಿಣಾಮದತ್ತ ಒಂದು ನೋಟ ಹರಿಸಿದರೆ ಉತ್ತಮ. ಉಪವಾಸದಲ್ಲೂ ನಾನಾ ವಿಧಾನಗಳಿವೆ. ಅಲ್ಪಾಹಾರದ ಉಪವಾಸ, ನೀರಿನ ಉಪವಾಸ, ಜ್ಯೂಸ್ ಉಪವಾಸ. ಆರೋಗ್ಯ ತಜ್ಞರ ಅಣತಿಯಂತೆ ಉಪವಾಸ ವ್ರತವನ್ನು ಕೈಗೊಳ್ಳುವುದ ಶ್ರೇಯಸ್ಕರ. ನಾನು ತಿನ್ನುವ ಆಹಾರದ ಬಗ್ಗೆ ಒಂದು ಹಿಡಿತ ಇಟ್ಟುಕೊಳ್ಳುವುದು ಮತ್ತು ಆಹಾರ ಸೇವನೆಯಿಂದ ದೇಹದ ಮೇಲಾಗುವ ದುಷ್ಪರಿಣಾಮಗಳನ್ನು ದೂರವಿರಿಸಲು ಉಪವಾಸಗಳನ್ನು ಕೈಗೊಳ್ಳಬಹುದು.

ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಎಲ್ಲರಿಗೂ ತಿಳಿದದ್ದೇ. ಎಲ್ಲ ದೈನಂದಿನ ಕೆಲಸಗಳ ನಂತರ ರಾತ್ರಿ ನಿದ್ರಿಸುವ ಹಾಗೆ ಜೀರ್ಣಕ್ರಿಯೆಗೂ ವಿಶ್ರಾಂತಿಯ ಅಗತ್ಯವಿದೆ. ತಿಳಿದಿರಲಿ, ಅನೇಕ ರೋಗಗಳಿಗೆ ಹೊಟ್ಟೆಯೇ ಅಡಗುದಾಣ. ವಿಪರೀತ ತಿನ್ನುವುದು, ದೇಹಕ್ಕೆ ಒಗ್ಗದ ಆಹಾರವನ್ನು ತಿನ್ನುವುದು, ಆಹಾರ ಸಮಯಕ್ಕೆ ಸರಿಯಾಗಿ ತಿನ್ನದೇ ಇರುವುದು ಅನೇಕ ರೋಗಗಳಿಗೆ ದಾರಿ ಮಾಡಿಕೊಡುತ್ತವೆ. ಜಠರದಲ್ಲಿರುವ ಜಾಗದ ಅರ್ಧಭಾಗ ಆಹಾರ, ಕಾಲು ಭಾಗ ನೀರು ಮತ್ತು ಕಾಲು ಭಾಗ ಗಾಳಿಗೆ ಮೀಸಲಿಡಬೇಕು ಅಂತಾರೆ ವೈದ್ಯರು. ಆದರೆ, ನಮಗೆ ಕಂಠದವರೆಗೂ ತಿಂದರೇನೆ ತೃಪ್ತಿ, ತಿನ್ನಿಸಿದವರಿಗೂ ತೃಪ್ತಿ.

ನೀವು ನಿಮ್ಮ ದೇಹ ಮತ್ತು ಆರೋಗ್ಯವನ್ನು ಪ್ರೀತಿಸುವಿರಾದರೆ ಆಹಾರ ಸೇವನೆ ಕ್ರಮದ ಬಗ್ಗೆ ಮತ್ತು ಉಪವಾಸದ ಬಗ್ಗೆ ಚಿಂತಿಸುವುದು ಒಳಿತು. ಆಯ್ಯೋ, ವಾಕ್ ಮಾಡಿದರಾಯಿತು, ಗ್ಯಾಸ್ ಟ್ರಬಲ್ ಶುರುವಾದರೆ ಜೆಲ್ಯುಸಿಲ್ ಸಿರಪ್ ಕುಡಿದರಾಯಿತು ಅಂತ ವಾದಿಸುವವರು ಮತ್ತೊಮ್ಮೆ ಚಿಂತಿಸಲಿ.

No comments:

Post a Comment