ಹೊಸ ವರ್ಷಕ್ಕೆ ಏನೇನು ನಿರ್ಣಯಗಳನ್ನು ಕೈಗೊಂಡಿದ್ದೀರಾ? ತೂಕ ಇಳಿಸ್ಬೇಕು, ಸಿಟ್ಟು ಮಾಡಿಕೊಳ್ಳಲೇಬಾರದು, ಯಾರನ್ನೂ ಟೀಕೆ ಮಾಡಬಾರದು... ಸ್ವಲ್ಪ ತಾಳಿ. ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ನಿರ್ಣಯಗಳೇನಾದರೂ ಕೈಗೊಂಡಿದ್ದರೆ ಆ ನಿರ್ಣಯಗಳನ್ನು ಮುರಿಯುವುದು ಒಳಿತು.
ಹೊಸ ವರ್ಷದ ನಿರ್ಣಯಗಳಿಗೆ ಅಂಟಿಕೊಳ್ಳುವುದರಿಂದ ಸಕಾರಾತ್ಮಕ ಪರಿಣಾಮಕ್ಕಿಂತ ದುಷ್ಪರಿಣಾಮ ಆಗುವುದೇ ಹೆಚ್ಚು. ದೈಹಿಕ ಮತ್ತು ಮಾನಸಿಕ ನ್ಯೂನತೆಗಳನ್ನು ಸರಿಪಡಿಸುವ ನಿರ್ಣಯಗಳು ಗುರಿ ಮುಟ್ಟದೇ ಹೋದರೆ ಋಣಾತ್ಮಕ ಪರಿಣಾಮ ಬೀರಬಲ್ಲವು. ಅಂತಹ ನಿರ್ಣಯಗಳು ಅಸಂತೋಷ, ಮಾನಸಿಕ ಖಿನ್ನತೆಗೆ ಕಾರಣವಾಗುತ್ತವೆ.
ನಿರ್ಣಯ ಕೈಗೊಂಡರೂ ಹೊಸ ವರ್ಷಕ್ಕೇ ಏಕೆ ಕೈಗೊಳ್ಳಬೇಕು? ಆಗತ್ಯ ಬಿದ್ದಾಗ ಕೈಗೊಂಡರೆ ಆಗದೆ? ಗುರಿಗಳು ಸಣ್ಣವಿರಲಿ, ಆದರೆ ದೀರ್ಘಕಾಲದ ಚೌಕಟ್ಟು ಹಾಕಿಕೊಂಡಿರಬೇಕು, ಸಾಧಿಸಲು ಸಾಧ್ಯವಾಗುವಂತಿರಬೇಕು.
ಹದಿನೈದಿಪ್ಪತ್ತು ಗುರಿಗಳನ್ನು ಇಟ್ಟುಕೊಳ್ಳುವುದಕ್ಕಿಂತ ಪುಟ್ಟದಾಗ ಒಂದೇ ಗುರಿಯಿರಲಿ. ಗುರಿ ಸಾಧಿಸಿದ ಮೇಲೆ ಇನ್ನೊಂದು ನಿರ್ಣಯ ಕೈಗೊಂಡರಾಯಿತು. ಕೆಲವರಿಗೆ ನಿರ್ಣಯ ಕೈಗೊಳ್ಳುವುದು ಒಂದು ರೀತಿಯ ತಮಾಷೆ. ಕೆಲವರಿಗೆ ಅಂದುಕೊಂಡಿದ್ದು ಕೈಗೂಡದಿದ್ದರೆ ಭಾರೀ ನಿರಾಶೆ.
ಇಂದು ಇಂದಿಗೆ, ನಾಳೆ ನಾಳೆಗೆ, ಇಂದು ನಮ್ಮಗೆ ಚಿಂತೆ ಏತಕೆ? ಅನ್ನುವಂತೆ ಹಿಂದಿನ ಬಗ್ಗೆ ಚಿಂತಿಸದೆ, ಇಂದಿನ ಪರಿಸ್ಥಿತಿಯ ಬಗ್ಗ ಕಳವಳಕ್ಕೀಡಾಗದೆ, ಮುಂದಿನ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ, ಬಂದದ್ದೆಲ್ಲಾ ಬರಲಿ ಗುರುವಾಯೂರಪ್ಪನ ದಯವೊಂದಿರಲಿ ಅಂದುಕೊಂಡು ಆರಾಮವಾಗಿದ್ದರಾಯಿತು. ನೆನಪಿಡಿ, ಹೊಸ ವರ್ಷಕ್ಕೆ ಸಣ್ಣಪುಟ್ಟ ನಿರ್ಣಯಗಳಿರಲಿ, ಪ್ರತಿಜ್ಞೆಗಳು ಬೇಡವೇ ಬೇಡ.
No comments:
Post a Comment