Tuesday, December 28, 2010
ಉತ್ತಮ ಆರೋಗ್ಯಕ್ಕೆ ಶಿಸ್ತುಬದ್ಧ ಜೀವನಶೈಲಿ
ಪ್ರಕೃತಿ ನಿಯಮದಂತೆ ಜೀವಜಗತ್ತಿನ ಪ್ರತಿಯೊಂದಕ್ಕೂ ತನ್ನದೇ ಆದ ಶಿಸ್ತಿದೆ. ಸೂರ್ಯ ಪೂರ್ವಕ್ಕೇ ಹುಟ್ಟುತ್ತಾನೆ, ಭೂಮಿ ವರ್ಷಕ್ಕೊಂದು ಬಾರಿ ಸೂರ್ಯನನ್ನು ಸುತ್ತುತ್ತಲೇ ಇರುತ್ತಾನೆ, ವರ್ಷಕ್ಕೊಂದೇ ಚೈತ್ರ... ಪ್ರಕೃತಿಯ ಒಂದು ಭಾಗವಾಗಿರುವ ಮನುಷ್ಯನೂ ಇದಕ್ಕೆ ಹೊರತಲ್ಲ. ಬೆಳಿಗ್ಗೆ ಏಳುವುದು, ತಿಂಡಿ ತಿನ್ನುವುದು, ಮಧ್ಯಾಹ್ನ ಊಟ, ರಾತ್ರಿ ಮತ್ತೊಂದು ಊಟ ಮತ್ತೆ ತಾಚಿ... ಆದರೆ ಬದಲಾಗುತ್ತಿರುವ ಜೀವನ ರೀತಿಯಿಂದಾಗಿ, ಬದಲಾಗುತ್ತಿರುವ ಅವಶ್ಯಕತೆಗಳಿಂದಾಗಿ ಅನೇಕರಿಗೆ ಇದು ಒಂದು ಶಿಸ್ತಾಗಿ ಉಳಿದಿಲ್ಲ.
ಒಂದು ಪೂರ್ತಿ ಎಂಟಿಟಿಯಾಗಿ ಮಾನವನಷ್ಟೇ ಏಕೆ, ಮಾನವನ ದೇಹದ ಭಾಗಗಳಿಗೂ ತನ್ನದೇ ಆತ ಶಿಸ್ತಿದೆ ಎಂದರೆ ಆಶ್ಚರ್ಯವಾಗಬಹುದು. ನಿಜ ಹೇಳಬೇಕೆಂದರೆ, ದೇಹದ ಭಾಗಗಳು ಮಾನವನಿಂದ ಶಿಸ್ತನ್ನು ಬೇಡುತ್ತವೆ. ಅವುಗಳಿಗೆ ಅನುಗುಣವಾಗಿ ನಮ್ಮ ಜೀವನರೀತಿಯನ್ನು ಬದಲಿಸಿಕೊಂಡರೆ ಅನೇಕ ರೋಗಗಳು ನಮ್ಮ ಹತ್ತಿರ ಸುಳಿಯಲು ಅವು ಬಿಡುವುದಿಲ್ಲ .
ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಪ್ರತಿನಿತ್ಯ ತಪ್ಪದೆ ಎದ್ದು, ಉಷಾಪಾನ ಮಾಡಿ, ನಿತ್ಯ ಕರ್ಮಗಳನ್ನು ಪೂರೈಸಿ, ವಾಯುವಿಹಾರ ಮುಗಿಸಿ, ಸರಿಯಾದ ವೇಳೆಗೆ ತಿಂಡಿ ತಿಂದು, ಮಿತವಾಗಿ ಮಧ್ಯಾಹ್ನದ ಊಟ ಮಾಡಿ, ರಾತ್ರಿ ಊಟ ಮುಗಿದ ಬಳಿಕ ಬೇಗನೆ ಮಲಗುವವನ ಆರೋಗ್ಯ ದಿವಿನಾಗಿರುತ್ತದೆ. ಆತ ದಿನಪೂರ್ತಿ ಚಟುವಟಿಕೆಯಿಂದಿರುತ್ತಾನೆ. ಹಾಗೆಯೇ, ನಮ್ಮ ದೇಹದ ಭಾಗವೇ ಆಗಿರುವ ಹೃದಯ, ಜಠರ, ಪುಪ್ಪುಸ, ಕರುಳು, ಮೂತ್ರಜನಕಾಂಗ, ಪಿತ್ತಜನಕಾಂಗ ಪ್ರತಿಯೊಂದರ ಕಾರ್ಯಾವಿಧಾನದಲ್ಲಿ ಒಂದು ಶಿಸ್ತಿದೆ. ಪ್ರತಿನಿತ್ಯ ಕ್ರಮಬದ್ಧವಾಗಿ ನಮ್ಮ ಕಾರ್ಯಗಳನ್ನು ನಿರ್ವಹಿಸುತ್ತಿದ್ದರೆ ಅವು ಕೂಡ ಅಷ್ಟೇ ಶಿಸ್ತಿನಿಂದ ಕಾರ್ಯನಿರ್ವಹಿಸುತ್ತಿರುತ್ತವೆ.
ಬೆಳಗ್ಗೆ 3 ಗಂಟೆಯಿಂದ ರಾತ್ರಿ ಮಲಗುವ ವೇಳೆ 9ರವರೆಗೆ ಯಾವ ಯಾವ ಅವಯವಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಗಮನಿಸೋಣ.
ಬೆಳಿಗ್ಗೆ 3ರಿಂದ 5 : ಈ ಸಮಯ ಪುಪ್ಪುಸಗಳಿಗೆ ಅತ್ಯಂತ ಪ್ರಶಸ್ತ ಸಮಯ. ಈ ವೇಳೆಯಲ್ಲಿ ಓಝೋನ್ ಅಂಶ ವಾತಾವರಣದಲ್ಲಿ ಹೆಚ್ಚಾಗಿರುತ್ತದೆ. ಕಪಾಲಭಾತಿ ಪ್ರಾಣಾಯಾಮ, ಯೋಗಾಸನ, ಮತ್ತಿತರ ವ್ಯಾಯಾಮಗಳನ್ನು ಮಾಡಿ, ಸ್ನಾನಾದಿಯಾದಮೇಲೆ ಪೂಜೆ ಪುನಸ್ಕಾರದಲ್ಲಿ ನಿರತರಾದರೆ ಹೃದಯಬೇನೆ ಹತ್ತಿರ ಸುಳಿಯದು.
ಬೆಳಿಗ್ಗೆ 5ರಿಂದ 7 : ನೀವು ಕೆಲವರನ್ನು ಗಮನಿಸಿರಬಹುದು. ಬೆಳಿಗ್ಗೆ ಎದ್ದು ಎಲೆ ಅಡಿಕೆ ಹಾಕದಿದ್ದರೆ ಅಥವಾ ಒಂದು ದಮ್ಮು ಎಳೆಯದಿದ್ದರೆ ಅಥವಾ ಸ್ಟ್ರಾಂಗಾಗಿ ಕಾಫಿ ಹೀರದಿದ್ದರೆ ಬಹಿರ್ದೆಶೆ ಸರಿಯಾಗಿ ಆಗುವುದಿಲ್ಲವೆಂದು ಕಂಡವರೆ ಮುಂದೆ ಅಭಿಮಾನದಿಂದ ಹೇಳುತ್ತಿರುತ್ತಾರೆ. ನಿಜ ಸಂಗತಿಯೆಂದರೆ, ಇವರು ಬೆಳಿಗ್ಗೆ ಏಳುವ ಸಮಯ ಸರಿಯಾಗಿರುವುದಿಲ್ಲ. 5ರಿಂದ 7 ಗಂಟೆ ಒಳಗಡೆ ಎದ್ದವರಿಗೆ ಮಲಬದ್ಧತೆ ಕಾಡುವುದಿಲ್ಲ. ಈ ಸಮಯದಲ್ಲಿ ಎದ್ದು ಬಹಿರ್ದೆಶೆ ಮುಗಿಸಿ, ತಣ್ಣಗಿನ ನೀರಿನಲ್ಲಿ ಮೀಯುವವರಿಗೆ ದಿನಪೂರ್ತಿ ಚಟುವಟಿಕೆಯಿಂದಿರುತ್ತಾನೆ, ಹೆಚ್ಚು ಸುಸ್ತಾಗುವುದಿಲ್ಲ.
ಬೆಳಿಗ್ಗೆ 7ರಿಂದ 9 : ಈ ಸಮಯದಲ್ಲಿ ತಿಂಡಿಯನ್ನು ತಿಂದು ಮುಗಿಸಿಬಿಟ್ಟಿರಬೇಕು ಮತ್ತು ಸ್ವಲ್ಪ ಹೆಚ್ಚು ಪ್ರಮಾಣದಲ್ಲಿ ಉದರ ತುಂಬಿಸಿಕೊಳ್ಳಬೇಕು. ಇದು ದಿನಪೂರ್ತಿ ಕೆಲಸಮಾಡಲು ಹುಮ್ಮಸ್ಸು ನೀಡುತ್ತದೆ. ಇದು ಜಠರದ ದೃಷ್ಟಿಯಿಂದ ಒಳ್ಳೆಯದು.
ಬೆಳಿಗ್ಗೆ 9ರಿಂದ 11 : ಈ ವೇಳೆಯಲ್ಲಿ ಏನೂ ತಿನ್ನಬಾರದು ಮತ್ತು ಒಂದು ತೊಟ್ಟು ನೀರು ಕೂಡ ಕುಡಿಯಬಾರದು. ಇವನ್ನು ಮಾಡಿದ್ದೇ ಆದರೆ ದೇಹದ ಉಷ್ಣಾಂಶ ಏರುತ್ತದೆ ಮತ್ತು ಬೇಗನೆ ಸುಸ್ತುಗುತ್ತದೆ. ಹಾಗೆಯೇ ಜೀರ್ಣಕ್ರಿಯೆ ಕೂಡ ಕುಂಠಿತವಾಗುತ್ತದೆ.
ಮಧ್ಯಾಹ್ನ 11ರಿಂದ 1 : ಹೃದಯದ ಬಗ್ಗೆ ಕಾಳಜಿಯಿರುವವರು ಗಮನಿಸಬೇಕು. ಈ ವೇಳೆಯಲ್ಲಿ ನೀರು ಮಾತ್ರ ಕುಡಿಯಬೇಕು. ಕೆಲಸದ ವೇಗವನ್ನು ಕೂಡ ಮಂದಗತಿಯಲ್ಲಿ ಮಾಡಬೇಕು. ಸಿಕ್ಕಾಪಟ್ಟೆ ಕೆಲಸ ಮಾಡಲೂಬಾರದು ಮತ್ತು ನಿದ್ರಿಸಲೂಬಾರದು. ಇಲ್ಲದಿದ್ದರೆ, ಇಂಗಾಲದ ಡೈಆಕ್ಸೈಡ್ ಆಮ್ಲಜನಕದ ಜೊತೆ ಜಾಸ್ತಿ ಕೂಡಿಕೊಂಡು ಹೃದಯಾಘಾತವಾಗುವ ಅಥವಾ ಪಾರ್ಶ್ವವಾಯು ಬಡಿಯುವ ಸಾಧ್ಯತೆ ಹೆಚ್ಚುತ್ತದೆ.
ಮಧ್ಯಾಹ್ನ 1ರಿಂದ 3 : ಈ ಸಮಯದಲ್ಲಿ ಮಧ್ಯಾಹ್ನದ ಊಟ ಮುಗಿಸಿ 5 ನಿಮಿಷ ಅಲ್ಪ ವಿರಾಮ ಪಡೆದರೆ ಸಣ್ಣಕರುಳು ಚುರುಕು ಮುಟ್ಟಿಸದೆ ಚಕಚಕನೆ ತನ್ನ ಕಾರ್ಯ ನಿರ್ವಹಿಸುತ್ತದೆ. ನೆನಪಿರಲಿ, ಈ ಸಮಯದಲ್ಲಿ ಅಪ್ಪಿತಪ್ಪಿಯೂ ಮಲಗಬಾರದು.
ಅಪರಾಹ್ನ 3ರಿಂದ 5 : ಸಾಯಂಕಾಲದ ಕಾಫಿಯೋ, ಜ್ಯೂಸನ್ನೋ ಹೀರಲು ಇದು ಅತ್ಯಂತ ಪ್ರಶಸ್ತ ಸಮಯ. ಮೂತ್ರಕೋಶದ ಹಿತದೃಷ್ಟಿಯಿಂದಲೂ ಒಳ್ಳೆಯದು.
ಸಾಯಂಕಾಲ 5ರಿಂದ 7 : ಈ ಸಮಯದಲ್ಲಿ ವಾಯುವಿಹಾರ ಅಥವಾ ಚಟುವಟಿಕೆಗಳಿಗೆ ಅಲ್ಪವಿರಾಮ ನೀಡುವುದು ಹಿತ. ಇಲ್ಲದಿದ್ದರೆ ಮೂತ್ರಕೋಶದ ತೊಂದರೆ ಅಥವಾ ಸೋಂಕು ಸಂಭವಿಸುವ ಸಾಧ್ಯತೆ ಜಾಸ್ತಿ.
ರಾತ್ರಿ 7ರಿಂದ 9 : ಈ ಸಮಯದೊಳಗಡೆ ರಾತ್ರಿ ಊಟವನ್ನು ತಪ್ಪದೆ ಮುಗಿಸಿಬಿಡಬೇಕು. ಅನಿಯಮಿತವಾಗಿದ್ದಲ್ಲಿ ಹೃದಯ ತಾಳತಪ್ಪುವ ಅಥವಾ ಹೃದಯಬೇನೆ ಇರುವವರಿಗೆ ಹೃದಯಾಘಾತವಾಗುವ ಸಂಭವನೀಯತೆ ಹೆಚ್ಚು. ಊಟವಾದ ನಂತರ ಅರ್ಧಗಂಟೆ ಬಿಟ್ಟು ವಾಯುವಿಹಾರ ಮುಗಿಸಿ ಮಲಗುವುದು ಹಿತಕರ.
ಇವನ್ನು ಪರಿಪಾಲಿಸಲು ಪ್ರಾರಂಭಿಸಿ ಒಂದೆರಡು ದಿನಗಳಲ್ಲಿಯೇ ಆರೋಗ್ಯದಲ್ಲಿ ಬದಲಾವಣೆ ಕಾಣದಿರಬಹುದು. ನಿಯಮಿತವಾಗಿ ದೀರ್ಘಕಾಲ ಆಚರಣೆಗೆ ತಂದಿದ್ದೇ ಆದರೆ ವೈದ್ಯರನ್ನು ದೂರವಿಡುವುದು ಅಸಾಧ್ಯವೇನಲ್ಲ.
Subscribe to:
Post Comments (Atom)
No comments:
Post a Comment