Monday, December 13, 2010

ತುಳಸಿ ಎಂಬ ಪ್ರಾಚೀನ ಆಂಟಿ ವೈರಸ್


ತುಳಸಿ ಅಥವಾ ತುಲಸಿ ಎಂಬ ಪದಕ್ಕೆ ಅಪ್ರತಿಮ, ಅದ್ವೀತಿಯ ಎಂಬ ಅರ್ಥ ಉಂಟು. ದೇವಾಲಯಗಳಲ್ಲಿ, ಯಾತ್ರಾಸ್ಥಳಗಳಲ್ಲಿ ಹೆಚ್ಚಾಗಿ ಕಾಣ ಸಿಗುವ ತುಳಸಿ, ಸಂಪ್ರದಾಯಸ್ಥ ಹಿಂದೂ ಕುಟುಂಬದ ಖಾಯಂ ಸದಸ್ಯೆ.

ಪವಿತ್ರ ತುಳಸಿ ಕಟ್ಟೆಗೆ ನಿತ್ಯ ಪೂಜೆ ನಡೆಯುವುದು ಮಾಮೂಲಿಯಾದರೂ ದೀಪಾವಳಿ ವೇಳೆಗೆ ತುಳಸಿಗೆ ಮದುಮಗಳ ಸಿಂಗಾರ ಸಿಗುತ್ತದೆ. ಅದು ಹಾಗಿರಲಿ, ತುಳಸಿ ನಮ್ಮ ಆರೋಗ್ಯಕ್ಕೆ ಹೇಗೆ ನೆರವಾಗುತ್ತಾಳೆ ನೋಡೋಣ.

ತುಳಸಿಗೆ ಒತ್ತಡ ನಿವಾರಕ ಗುಣವಿದೆ. ಹಿಂದೆಲ್ಲಾ ದೂರದ ಊರಿನಿಂದ ಬರುವ ಯಾತ್ರಿಕರು ತುಳಸಿ ಎಲೆಯನ್ನು ಜಗಿದು ಪ್ರಯಾಣದ ಆಯಾಸವನ್ನು ನೀಗಿಸಿಕೊಂಡು ಸಾಗುತ್ತಿದ್ದರಂತೆ.

ಪ್ರಮುಖವಾಗಿ ಎರಡು ವಿಧಗಳಲ್ಲಿ ಸಿಗುತ್ತದೆ. ಒಂದು ಕೃಷ್ಣ ತುಳಸಿ(ಕಪ್ಪಗಿನದು) ಇನ್ನೊಂದು ಶ್ರೀ ತುಳಸಿ(ಬಿಳಿಯ ವರ್ಣದ್ದು). ಒತ್ತಡ ನಿವಾರಣೆ ಜತೆಗೆ ಇದು ಅತ್ಯುತ್ತಮ ವೈರಾಣು ರಕ್ಷಕ(anti -virus). ತುಳಸಿಯ anti -virus ಗುಣದ ಬಲದಿಂದ ವಿಷಮ ಶೀತ ಜ್ವರ(viral fever), ಮಲೇರಿಯಾದಂತಹ ಕಾಯಿಲೆಯನ್ನು ಹೋಗಲಾಡಿಸಬಹುದು.

ತುಳಸಿಯ ಸಾಮಾನ್ಯ ಉಪಯೋಗಗಳು:

* ಜ್ವರಕ್ಕೆ: ಚೆನ್ನಾಗಿ ಅರೆದ ತುಳಸಿಯನ್ನು ಬಟ್ಟೆಯಲ್ಲಿ ಸೋಸಬೇಕು. ತುಳಸಿ ರಸವನ್ನು 1-2 ಟೀ ಚಮಚ(ಮಕ್ಕಳಿಗೆ) ಅಥವಾ 2-4 ಟೀ ಚಮಚ(ದೊಡ್ಡವರಿಗೆ) ಜೇನಿನೊಂದಿಗೆ ದಿನಕ್ಕೆ 2 ರಿಂದ 3 ಬಾರಿನೀಡಬಹುದು.

* ತುಳಸಿ ರಸವನ್ನು ಶ್ವಾಸಕೋಶಗಳ ಸೋಂಕು, ಕೆಮ್ಮು, ನೆಗಡಿ ಹೋಗಲಾಡಿಸಲು ಸೇವಿಸಬಹುದು.

* ಜೇಡ ಕಚ್ಚಿದರೆ ತುಳಸಿ ರಸಕ್ಕೆ ಅರಿಶಿನವನ್ನು ಬೆರೆಸಿ ಜೇಡ ಕಚ್ಚಿದ ಸ್ಥಳದ ಮೇಲೆ ಹಚ್ಚಬೇಕು. ಹಾಗೂ ಸೇವಿಸಬೇಕು.

* ಕೆಂಡದಲ್ಲಿ ಬಾಡಿಸಿದ ತುಳಸಿಯನ್ನು ಬಟ್ಟೆಯಲ್ಲಿ ಕಟ್ಟಿ ನಾಸಿಕದ ಬಳಿ ಹಿಡಿದುಕೊಂಡು ಉಸಿರನ್ನು ಒಳಗೆ ಎಳೆದುಕೊಂಡರೆ, ಕಟ್ಟಿದ ನಾಸಿಕ ಸಡಿಲವಾಗಿ ಶೀತ ಮಾಯವಾಗುತ್ತದೆ.

* ತುಳಸಿರಸ ಹಾಗೂ ಜೇನುತುಪ್ಪವನ್ನು ತಲಾ 3 ಮಿ.ಗ್ರಾಂನಷ್ಟು ಕಲೆಸಿ ಸೇವಿಸಿದರೆ ಜೀರ್ಣಶಕ್ತಿ ಹೆಚ್ಚುತ್ತದೆ.

* ತುಳಸಿ, ಮೆಣಸು, ಒಣಶುಂಠಿ ಮತ್ತು ಇದ್ದಿಲನ್ನು ಪುಡಿಮಾಡಿ ಕಷಾಯಮಾಡಿ ಕುಡಿದರೆ ನೆಗಡಿ ಗುಣವಾಗುತ್ತದೆ.

* ಮನೆಯಂಗಳದಲ್ಲಿ ತುಳಸಿ ಬೆಳೆಸುವುದರಿಂದ ವಾತಾವರಣ ಸೂಕ್ಷ್ಮಾಣು ಜೀವಿಗಳ ತೊಂದರೆಯಿಂದ ಮುಕ್ತವಾಗುತ್ತದೆ. ಮಾನವನ ದೇಹಕ್ಕೆ ಅಗತ್ಯವಾದ ಆಮ್ಲಜನಕ ಯಥೇಚ್ಛವಾಗಿ ಸಿಗುತ್ತದೆ.

* ತುಳಸಿ ಕಷಾಯವನ್ನು ಮಾಡಿ ಹಾಲು ಮತ್ತು ಸಕ್ಕರೆಯನ್ನು ಬೆರೆಸಿ ಕುಡಿಯುತ್ತ ಬಂದರೆ ದೇಹ ಸದೃಢವಾಗುತ್ತದೆ.ದೇಹದ ಕಾಂತಿ ಹೆಚ್ಚುತ್ತದೆ.

* ಕುಡಿಯುವ ನೀರಿನ ಪಾತ್ರೆಗೆ ನಾಲ್ಕಾರು ತುಳಸಿ ದಳಗಳನು ಹಾಕುವುದರಿಂದ ನೀರಿನ ಶುದ್ಧತೆ ಹೆಚ್ಚಿ, ಸೇವಿಸಲು ಉತ್ತಮವಾಗುತ್ತದೆ.

* ತುಳಸಿ ಎಲೆಯ ರಸವನ್ನು ಕಾಲುಭಾಗ ಎಣ್ಣೆಯಲ್ಲಿ ಕಾಯಿಸಿ ತಲೆಗೆ ಹಚ್ಚಲು ತಲೆಯಲ್ಲಿ ಹೇನು, ಹೊಟ್ಟು ಬರುವಿಕೆ ನಿವಾರಣೆಯಾಗುತ್ತದೆ.

* ಚರ್ಮದ ಸೋಂಕು ನಿವಾರಣೆಗೂ ತುಳಸಿ ದಳ ಪ್ರಯೋಜನಕಾರಿ. ಸ್ನಾನದ ನೀರಿಗೆ ಕೆಲವು ತುಳಸಿ ದಳಗಳನ್ನು ಹಾಕಿ ಕೆಲ ನಿಮಿಷಗಳ ಕಾಲ ಬಿಟ್ಟು ನಂತರ ಸ್ನಾನ ಮಾಡಿದರೆ, ಚರ್ಮ ಮೃದುವಾಗುವುದಲ್ಲದೆ, ರೋಗಮುಕ್ತವಾಗುತ್ತದೆ.

* ಚರ್ಮದ ತುರಿಕೆ, ಇಸುಬು, ಫಂಗಸ್ ಗಳ ಉಪಶಮನಕ್ಕೆ ತುಳಸಿ ಬಳಕೆ ಸಾಮಾನ್ಯ.

* ದೇಹದ ಪ್ರತಿರೋಧಕ ಶಕ್ತಿ ಹೆಚ್ಚಿಸುವುದರಿಂದ ದೀರ್ಘಾಯುಸ್ಯ ಹೊಂದ ಬಯಸುವವರು ತುಳಸಿ ಜಗಿಯಬಹುದು.

No comments:

Post a Comment