Sunday, December 12, 2010

ಅಧಿಕ ಪ್ರೊಟೀನ್ ಇರುವ ನುಗ್ಗೆ ಸೊಪ್ಪಿನ ಚಟ್ನಿ



ನುಗ್ಗೆ ಮರದ ಎಲೆಯ ಚಟ್ನಿಯನ್ನು ತಯಾರಿಸುವ ಮುನ್ನ ನುಗ್ಗೆ ಮರದಿಂದ ಆರೋಗ್ಯದ ಮೇಲಾಗುವ ಪರಿಣಾಮವನ್ನು ತಿಳಿದುಕೊಳ್ಳುವುದು ಉತ್ತಮ. ಇದನ್ನು ತಿಳಿದ ನಂತರ ನುಗ್ಗೆ ಮರದ ಎಲೆಯ ಚಟ್ನಿಯನ್ನು ನೀವು ಮಾಡದೆ ಬಿಡಲಾರಿರಿ.

ಬಾಳೆ ಗಿಡ, ತೆಂಗಿನ ಮರದಂತೆ ನುಗ್ಗೆ ಮರದ ಪ್ರತಿಯೊಂದು ಭಾಗವೂ ಪ್ರಯೋಜನಕಾರಿ. ನುಗ್ಗೆ ಕಾಯಿ ಹುಳಿ ಬಲು ರುಚಿಕರ. ಹಾಗೆಯೇ ನುಗ್ಗೆ ಮರದ ಎಲೆಯ ಚಟ್ನಿ ಕೂಡ ಚಪಾತಿ, ದೋಸೆಗೆ ಹೇಳಿ ಮಾಡಿಸಿದ್ದು. ನುಗ್ಗೆ ಮರದ ಕಾಂಡವನ್ನು ಔಷಧ ತಯಾರಿಸಲು ಬಳಸುತ್ತಾರೆ. ನುಗ್ಗೆ ಕಾಯಿಯಲ್ಲಿ ಅನ್ನಾಂಗ ಎ, ಬಿ1, ಬಿ2, ಬಿ3, ಸಿ, ಮತ್ತು ಕ್ಯಾಲ್ಸಿಯಂ ಹಾಗು ಕಬ್ಬಿಣದ ಅಂಶ ಅತ್ಯಧಿಕವಾಗಿರುತ್ತದೆ.

ಹಸಿರು ನುಗ್ಗೆ ಎಲೆಯಲ್ಲಿನ ಪ್ರೊಟೀನ್ ಪ್ರಮಾಣ ಭೂಮಿಯ ಮೇಲಿನ ಯಾವುದೇ ಹಸಿರೆಲೆಗಿಂತ ಅಧಿಕ. ಇದರಲ್ಲಿನ ಕಬ್ಬಿಣದ ಅಂಶ ಕೂಡ ಉಳಿದ ಹಸಿರೆಲೆಗಳಿಗೆ ಹೋಲಿಸಿದರೆ ಜಾಸ್ತಿ. ಕಬ್ಬಿಣದ ಅಂಶ ಕಡಿಮೆಯಾಗಿ ಆರೋಗ್ಯ ಏರುಪೇರಾದರೆ ನುಗ್ಗೆ ಸೊಪ್ಪಿನಿಂದ ತಯಾರಿಸಿದ ಆಹಾರ ಅತ್ಯುಪಯುಕ್ತ. ಈಗ ಚಟ್ನಿಯನ್ನು ಮಾಡುವ ವಿಧಾನವನ್ನು ತಿಳಿಯೋಣ.
* ಒಂದು ಬೋಗುಣಿಯಲ್ಲಿ 1 ಚಮಚ ಎಣ್ಣೆ ಹಾಕಿ ಬಿಸಿಯಾದ ಮೇಲೆ ಮೆಣಸಿನಕಾಯಿ, ಕರಿ ಮೆಣಸು, ಜೀರಿಗೆ, ನುಗ್ಗೆ ಸೊಪ್ಪು ಹಾಕಿ ಹುರಿಯಿರಿ.
* ಇದಕ್ಕೆ ಉಪ್ಪು, ಹುಣಸೆಹಣ್ಣು, ತೆಂಗಿನಕಾಯಿ ತುರಿ ಬೆರೆಸಿ, ಸ್ವಲ್ಪವೇ ನೀರು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
* ಈ ಚಟ್ನಿಯನ್ನು ಚಪಾತಿ ಅಥವಾ ದೋಸೆಯೊಡನೆ ತಿನ್ನಲು ಚೆನ್ನಾಗಿರುತ್ತದೆ. ಅಥವಾ ಬಿಸಿ ಅನ್ನದ ಜೊತೆಯೂ ಒಂದು ಚಮಚ ತುಪ್ಪ ಬೆರೆಸಿ ಉಣ್ಣಬಹುದು.

No comments:

Post a Comment