Friday, February 4, 2011

ನನ್ನ ಬದುಕಿನ ಭಾವನೆ



ನಾವು ನಮ್ಮ ಬದುಕು ಸುಂದರವಾಗಿರಬೇಕು ಅಂತ ನಾನು ಅಸೆ ಪಡ್ತೀನಿ . ಮನೆ ಚಿಕ್ಕದಾದರೂ ಪರವಾಗಿಲ್ಲ ಆದರೆ ಚೊಕ್ಕವಾಗಿರಬೇಕು . ಮನೆ ಮುಂದೆ ಒಂದು ತುಳಸಿಕಟ್ಟೆ . ತುಳಸಿಕಟ್ಟೆ ತುಂಬಾ ಹರಡಿರುವ ತುಳಸಿ ಗಿಡ , ನನ್ನ ಪ್ರಕಾರ ಪ್ರತಿಯೊಂದು ಮನೆಗೂ ತುಳಸಿಕಟ್ಟೆ ಹೊನ್ನು ಕಲಶ ವಿದ್ದಂತೆ , ಆ ತುಳಸಿಕಟ್ಟೆ ಯಲ್ಲಿರುವ ತುಳಸಿಗಿಡವನ್ನು ನೋಡಿ ಅ ಮನೆಯ ಅರ್ಥಿಕ ಸ್ಥಿತಿಯನ್ನು ಪರಿಗಣಿಸಬಹುದು. ಮನೆಯ ಸುತ್ತಮುತ್ತ ಹಲವಾರು ಹೂವಿನ ಗಿಡ ಇದ್ದರಂತೂ ಮನೆಯ ಸೌಂದರ್ಯ ಇನ್ನೂ ಇಮ್ಮಡಿಯಾಗಬಹುದು.

ಹಳೆಯ ಕಾಲದ ಮನೆ ನನಗೆ ತುಂಬಾ ಪ್ರೀತಿ ಯಾಕೆಂದರೆ ಗತಕಾಲದ ವೈಭವ ಕಾಣಲಿಕ್ಕೆ ಸಾಧ್ಯ ಅದರಲ್ಲೂ ತುಂಬು ಕುಟುಂಬ ಅಲ್ಲಿರಬೇಕು ತುಂಬಾ ಮಕ್ಕಳು ಒಬ್ಬರು ಅಜ್ಜ ಅಜ್ಜಿ ಮತ್ತಿಬ್ಬರು ಹಿರಿಯರು ಹಾಗೆ ತುಂಬು ಸಂಸಾರ , ಅಲ್ಲಿ ಯಾವುದೇ ನಿರ್ಧಾರವೂ ಸದಸ್ಯರೆಲ್ಲ ಒಮ್ಮತದಿಂದ ಕೂಡಿರುತ್ತದೆ. ಕೂಡು ಕುಟುಂಬ ಇದ್ದಾರೆ ಅಲ್ಲಿ ಯಾವಾಗಲು ಸಂತೋಷದ ವಾತಾವರಣ ಇದ್ದೆ ಇರುತ್ತದೆ . ಈಗ ನನಗೆ ನಮ್ಮ ಅಜ್ಜಿ ಮನೆಯೇ ನೆನಪಾಗುವುದು . ಯಾಕೆಂದರೆ ನಮ್ಮ ಅಜ್ಜಿ ಮನೆ ತುಂಬು ಸದಸ್ಯರ ಕುಟುಂಬ . ನಾನು ಚಿಕ್ಕದಿರುವಾಗ ಅಲ್ಲಿ ಜಾಸ್ತಿ ಸಮಯವನ್ನು ಕಳೆಯುತ್ತಿದ್ದೆ . ನನ್ನ ಅಜ್ಜಿಗೆ 28 ಮಂದಿ ಮೊಮ್ಮಕಳು. ಎಲ್ಲರಲ್ಲೂ ಪ್ರೀತಿನೆ ಅದರಲ್ಲೂ ನನ್ನಲಿ ಅದೇನೋ ಒಂಥರಾ ಎಲ್ಲ ವಿಷಯ ಕರೆದು ಹೇಳುತ್ತಿದ್ದರು . ನನ್ನ ಜೀವನದಲ್ಲಿ ಹಿರಿಯರ ಅನುಭವ ತುಂಬಾನೇ ಇದೆ . ಒಂದು ಸಲ ನಾನು ಆಟವಾಡುತ್ತಿದ್ದಾಗ ಬಿದ್ದು ಪೆಟ್ಟಾಗಿ ನಮ್ಮ ಅಜ್ಜಿನೆ ನನ್ನ ಕೈ ಸರಿ ಮಾಡಿದ್ದು . ವಿಶುವಿನವತ್ತು ಯಾವಾಗಲು ದೇವರ ಆಶೀರ್ವಾದ ಪಡೆದ ಮೇಲೆ ನಮ್ಮ ಅಜ್ಜಿಯ ಕಾಲು ಮುಟ್ಟಿ ಆಶೀರ್ವಾದ ಪಡೆಯುತ್ತಿದೆವು . ಆ ಕಾಲ ತುಂಬಾನೇ ಚೆನ್ನಾಗಿತ್ತು . ಅಜ್ಜಿ ಮನೆಯಲ್ಲಿ ಏನು ಸಮಾರಂಭ ನಡೆದರೂ ನಮಗೆಲ್ಲ ಖುಷಿಯೋ ಖುಷಿ . ಯಾಕೆಂದರೆ ನಾವೆಲ್ಲ ಅಂದರೆ ಅಮ್ಮ ,ಪಪ್ಪಾ ,ದೊಡ್ದಮ್ಮಂದಿರು , ದೊದಪ್ಪಂದಿರು, ಚಿಕ್ಕ , ಆಂಟಿಯರು ಎಲ್ಲರೂ ಒಂದೇ ಮನೆಯಲ್ಲಿ ಸೇರುತ್ತಿದ್ದೆವು , ಆಗ ಮನಸ್ಸು ಸಂತೋಷದ ತುತ್ತ ತುದಿಯಲ್ಲಿ ಇರುತ್ತಿದ್ದವು . ಈಗ ಎಲ್ಲವೂ ತುಂಬಾ ಮಿಸ್ ಅಗ್ತೀದೆ .

ಮುಖ್ಯವಾಗಿ ಮನೆಯಷ್ಟೇ ಆ ಮನೆಯ ಸದಸ್ಯರ ಮನಸ್ಸು ಸುಂದರವಾಗಿರಬೇಕು . ಯಾಕೆಂದರೆ ಸುಂದರ ಮನಸ್ಸಿನ ಮೇಲೆ ಸುಂದರ ಬದುಕು ಅವಲಂಬಿತವಾಗಿರುತ್ತದೆ . ಸುಂದರ ಮನಸ್ಸು ಎಂಬುದು ಕೇವಲ ಸಂತನ ಮನಸ್ಸಲ್ಲ. ಅಥವಾ ಕೇವಲ ವಿಜ್ಞಾನಿಯ ಮನಸ್ಸೂ ಅಲ್ಲ. ಪ್ರತಿಯೊಂದು ಸುಂದರ ಮನಸ್ಸೂ ತನಗೆ ತಾನೇ ಮಾದರಿ. ಹಾಗಾಗಿ ಗಾಂಧೀಜಿಯಂಥ ಸುಂದರ ಮನಸ್ಸನ್ನು ಹೊಂದಲು ಗಾಂಧೀಜಿಯನ್ನು ಅನುಕರಿಸುವುದಕ್ಕೆ ಅರ್ಥವಿಲ್ಲ. ಆದರೆ ಗಾಂಧೀಜಿಯ ತಾತ್ವಿಕತೆಯನ್ನು ಅನ್ವಯಿಸಿಕೊಂಡು ಬದುಕಲು ಪ್ರಯತ್ನಿಸುವುದು ನಮ್ಮ ಮನಸ್ಸನ್ನು ಸುಂದರಗೊಳಿಸುತ್ತದೆ.

ನನ್ನ ಬದುಕಲ್ಲಿ ನನಗೆ ಮಾನವ ಜನ್ಮವಾಗಿ ಬದುಕಲು ಅನುಗ್ರಹಿಸಿದ ಆ ಪರಮಾತ್ಮನಿಗೆ ಶ್ರೇಷ್ಠವಾದ ಸ್ಥಾನವಿದೆ, ಒಳ್ಳೆಯ ಭಕ್ತಿಯಿದೆ , ಗೌರವವಿದೆ . ಮನೆಯಲ್ಲಿ ಪೂಜಾ ರೂಂ ಪ್ರತ್ಯೇಕವಿದ್ದರೆ ತುಂಬಾ ಅನುಕೂಲ. ಬೆಳಿಗ್ಗೆ ಮತ್ತು ಸಂಧ್ಯಾ ಸಮಯದಲ್ಲಿ ದೀಪವಿಡುವುದು ಸಂಪ್ರದಾಯ . ಆದರೆ ಅದನ್ನು ಆಯಾ ಸಮಯದಲ್ಲಿ ಪಾಲಿಸಿದರೆನೆ ಅದಕ್ಕೆ ಮಹತ್ವ ವಿರುವುದು. ಆ ಸಮಯದಲ್ಲಿ ಅಗೋಚರವಾದ ಶಕ್ತಿ ಮನೆಯ ನಾಲ್ಕು ಕೇಂದ್ರಗಳಲ್ಲೂ ಎಚ್ಚರವಾಗಿ ನಮ್ಮನ್ನು ಹರಸುತ್ತಿದೆಯಂತೆ . ಅದಕ್ಕೆ ಹಿರಿಯರೂ ಹೇಳುವದು ಕೆಟ್ಟ ಪದ ಬಳಸಬಾರದು ಆ ಸಮಯದಲ್ಲಿ ಅಂತ . ಯಾಕೆಂದರೆ ಕೆಟ್ಟ ಪದ ಬಳಕೆ ಮಾಡಿದಾಗಲೂ ಆ ಶಕ್ತಿ ಹಾಗೆಯೆ ಅಗಲಿ ಎಂದು ಹರಸಿದರೆ ಕೆಟ್ಟದು ಬರದಿರುತ್ತದೆಯೇ ? ಸಮಯ ಸಿಕ್ಕಾಗ ಧ್ಯಾನ meditation ಮಾಡ್ತೀನಿ . ಆಮೇಲೆ ಪ್ರಾಣಯಾಮ ಮಾಡ್ತೀನಿ . ಇದರಿಂದ ನನ್ನಗೆ ಒಳ್ಳೆಯ ಆರೋಗ್ಯವೂ ಮಾನಸಿಕ ನೆಮ್ಮದಿಯೂ ದೊರಕುತ್ತ ಇದೆ .ನಾವು ಮಾಡುವ ಸಂಪ್ರದಾಯವನ್ನು ನಾವು ಯಾವತ್ತು ಮುರಿಯಬಾರದು . ಯಾಕೆಂದರೆ ನಮ್ಮ ಮುಂದಿನ ಪೀಳಿಗೆಗೆ ಅದು ಮಾದರಿಯಾಗಬೇಕು . ನಾವು ಮಾಡಿದನ್ನೇ ಅವರು ಅನುಸರಿಸಿ ಕೊಂದು ಹೋಗುವವರು .

ಯಾರೂ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ತಪ್ಪು ಮಾಡಿದರೆ ನಾವು ಅಂದರೆ ತಿಳಿದವರೂ ಕ್ಷಮಿಸಬೇಕು . ಯಾಕೆಂದರೆ ತಪ್ಪು ಮಾಡುವುದು ಮನುಷ್ಯನ ಸಹಜ ಗುಣ . ಹಾಗಂತ ತಪ್ಪು ಮಾಡುತ್ತಲೇ ಇರುವುದು ಸರಿಯಲ್ಲ "ತಪ್ಪೇ ಮಾಡದವರು ಎಲ್ಲವ್ರೆ ? ತಪ್ಪೇ ಮಾಡದವ್ರು ಹೆಂಗವ್ರೆ ? ಅಂತ ಒಂದು ಪದ್ಯನೆ ಇದೆಯಲ್ವ ? ಕ್ಷಮೆ ಕೇಳೋದಕ್ಕಿಂತಲೂ ಕ್ಷಮೆ ಕೊಡುವುದರಲ್ಲಿ ಏನೋ ಒಂಥರಾ ಸುಖ ಇದೆ , ಆದರೆ ಕೆಲವರಿಗೆ ಅದರ ಅನುಭವ ವಿರುವುದಿಲ್ಲ . ಆಮೇಲೆ ಕೋಪ ಯಾರಿಗೆ ತಾನೇ ಬರಲ್ಲ ಹೇಳಿ ? ಕೋಪ ಬಂದರೆ ಏನು ಮಾಡಬೇಕು ಗೊತ್ತಾ ? ಹಾಗೇನೆ ಸುಮ್ಮನೆ ಇದ್ದುಬಿಡಿ . ಮಾತನಾಡಲು ಹೋದರೆ ಅಲ್ಲಿ ಕುರು ಕ್ಷೇತ್ರನೆ ನಡಿಬಹುದು . ಸಮಯ ಹೋದ ಹಾಗೆ ಕೋಪದ ಬೇಗೆ ಕಡಿಮೆಯಾಗುತ್ತದೆ .ಅದರೆ ನಾವು ಮನುಷ್ಯ ಪ್ರಾಣಿಗೆ ಸೇರಿದವರಾಗಿರುವುದರಿ೦ದ ನಮಗೆ ಬೇರೆ ಪ್ರಾಣಿಗಳಗಿ೦ತ ಬುದ್ದಿಮಟ್ಟ ಜಾಸ್ತಿ ಇರುವುದರಿ೦ದ, ನಾವು ಅದನ್ನು ಸ್ವಲ್ಪ ಪರಿಶೀಲನೆ ಮಾಡಿ ನಮ್ಮ ಜೀವನದಲ್ಲಿ ಅಳವಡಿಸಕೊಳ್ಳಬೇಕಾಗಿದೆ.ನಾವು ಬಹಳಷ್ಟು ಸಾರಿ ಹೃದಯ ಮಾತು ಕೇಳಿ ಮೋಸ ಹೊಗಿತ್ತೆವೆ. ಹಾಗ೦ತ ಯಾವಾಗಲು ಮೆದಳಿನ ಮಾತೇ ಕೇಳಬೆಕು ಎ೦ದಲ್ಲ. ಕಷ್ಟ, ದುಃಖ, ಸ೦ತೋಷ, ಸುಃಖ ಹ೦ಚಿಕೊಳ್ಳಬೇಕಾದರೆ ನಾವು ಹೃದಯದ ಮಾತೇ ಕೇಳಬೇಕು.

ಪ್ರೀತಿ ಬಗ್ಗೆ ಏನು ಹೇಳಲಿ ? ನಿಜ ಹೇಳಬೇಕೆಂದರೆ ಪ್ರೀತಿಯಿಂದ ಏನನ್ನು ಗೆಲ್ಲಬಹುದು , ದ್ವೇಷವನ್ನು ಕೂಡ . ಹಾಗಾಗಿ ನಾವು ಎಲ್ಲವನ್ನು ಪ್ರೀತಿಸಬೇಕು ಅದು ಮನುಷ್ಯ ರೂಪವಾಗಿರಲಿ ಅಥವಾ ಯಾವುದೇ ವಸ್ತುವಿನ ರೂಪವಾಗಿರಲಿ . ಮನುಷ್ಯ ಮನುಷ್ಯರೊಳಗಿನ ಸಂಬಂಧ ಯಾವತ್ತು ಪ್ರೀತಿಯಿಂದ ಕೂಡಿರಬೇಕು . ಆಗ ಮಾತ್ರ ಸಾಮರಸ್ಯದ ಬದುಕು ನಮ್ಮಿಂದ ಸಾಧ್ಯ. ದೇವರು ಮನುಷ್ಯನಿಗೆ ಬರೀ ಹೃದಯವನ್ನು ಮಾತ್ರ ಕೊಡಲಿಲ್ಲ. ತರ್ಕಿಸಲು ಮೆದುಲು ಮತ್ತು ಸ್ಪಂದಿಸಲು ಮನಸ್ಸು, ಅದರ ಜೊತೆಗೆ ಪಂಚೇಂದ್ರಿಯಗಳನ್ನೂ, ದೇಹವನ್ನು ಕೊಟ್ಟ. ಬಾಳಿನ ಪುಟಗಳು ಮಗುಚಿ ಬೀಳುತ್ತಿದ್ದಂತೆಯೇ ಏರುಪೇರುಗಳು, ಕಷ್ಟ-ದುಃಖಗಳನ್ನು ಎದುರಿಸುವ ತಾಕತ್ತು ಇವೆಲ್ಲ ಕೊಟ್ಟಿದ್ದಾನೆ . ಪ್ರೀತಿಯನ್ನು ಪ್ರೀತಿಯಿಂದ ಮಾತ್ರ ಗಳಿಸಬಹುದು. ಕೋಪದ ಕೂಪದಿಂದ ಪ್ರೀತಿಯನ್ನು ಗಳಿಸುವುದು ಅಸಾಧ್ಯವಾದಮಾತು. ಪ್ರೀತಿಯಿಂದ ಕೋಪವನ್ನು ಗೆಲ್ಲಬಹುದು. ಸಂತೋಷ, ದುಃಖ, ಅಚ್ಚರಿ, ನೋವು ಈ ಎಲ್ಲಾ ಸ್ಥಿತಿಗಳಲ್ಲೂ ಒಂದೇ ತೆರನಗಿದ್ದರೆ ಅದೆಂಥಾ ಬದುಕು?

ಮನುಷ್ಯ ಹುಟ್ಟು-ಸಾವಿನಲ್ಲಿ ಮಾತ್ರ ಒಂಟಿ. ಬದುಕು 'ಸಮೂಹದ' ಮದ್ಯೆಯೇ ಸಾಗುತ್ತದೆ. ಬಸ್ಸು ಹತ್ತುವಾಗ, ಬೀದಿಯಲ್ಲಿ, ಕಋಏರಿಯಲ್ಲಿ, ಹಾದಿಯಲ್ಲಿ, ವಿದ್ಯಾ ಕೇಂದ್ರಗಳಲ್ಲಿ ಸದಾ ನಮ್ಮೊಂದಿಗೆ ಇರುವವರೆಲ್ಲಾ ಬೇರೆ-ಬೇರೆಯಗುತ್ತಾರೆ. ಅವರೀಲ್ಲಾ ನಮ್ಮ ಸ್ವಂತ ಜನ ಅಲ್ಲದಿರಬಹುದು, ಆಗಿರಲೂಬಹುದು. ಜೀವನ ಪೂರ್ತಿ ನಮ್ಮೊಂದಿಗೆ ಇರುವವರಲ್ಲ.ಹೀಗೆಂದು ನಾವು ಸಮಾಜದಲ್ಲಿ ಬಾಳಲು ತಾಳ್ಮೆ ಅತ್ಯಗತ್ಯ. ವಾಸ್ತವಿಕತೆಯನ್ನು ಒಪ್ಪಿಕೊಂಡು ಇತರರ ಬಗ್ಗೆ ನಿರೀಕ್ಷೆಗಳನ್ನು ಕಡಿಮೆ ಮಡುಕೊಂಡು ಬದುಕುವುದು ಕಲಿತುಕೊಂಡರೆ'ಕೋಪ' ಎಂಬ 'ಕೂಪ'ದಿಂದ ಹೊರಗೆ ಬರಬಹುದು. ಮನಸ್ಸನ್ನು ಆರಾಮವಾಗಿಟ್ಟು ನಿಸರ್ಗದ ಸೊಬಗನ್ನು ಸವಿಯುತ್ತಾ ಸತ್ಯಾಸತ್ಯಗಳನ್ನು ಕೇಳಿಕಂಡು ಅರಿತು, ಯಾರಿಗೂ ಹೊರೆಯಾಗದೆ ಬದುಕಬೇಕು.

No comments:

Post a Comment