Thursday, February 3, 2011
ಸಕಲ ಕಲ ವಲ್ಲಭ ಮೈಕ್ರೋವೇವ್ ಓವನ್
ಮೈಕ್ರೋವೇವ್ ಓವೆನ್ ಇಂದಿನ ದಿನಗಳಲ್ಲಿ ಆಧುನಿಕ ಅಡುಗೆಮನೆಗಳ ಅವಿಭಾಜ್ಯ ಅಂಗವಾಗಿದೆ. ಗೃಹಿಣಿಯರಿಗೆ, ಕೆಲಸಕ್ಕೆ ಹೋಗುವ ಮಹಿಳೆಯರಿಗೆ, ಅಮ್ಮನ ಅಡುಗೆಯ ರುಚಿ ಇಲ್ಲದೆ ಹೊರಗಡೆ ಕೆಲಸಕ್ಕೆ ಹೋಗುವವರಿಗೆ, ಓದಲು ಬಂದ ಹುಡುಗರಿಗೆ ಮತ್ತು ಎಲ್ಲ ವಯೋಮಾನದವರಿಗೂ ಇದೊಂದು ವರದಾನವೇ ಸರಿ. ಬರಿ ಬಿಸಿ ಮಾಡಲು ಉಪಯೋಗಿಸುವುದಕ್ಕಿಂತ ಎಲ್ಲ ರೀತಿಯಲ್ಲಿ ಎಲ್ಲರಿಗೂ ಉಪಯೋಗವಾಗಲಿ ಎಂದು ಓವೆನ್ ನ ಬಗ್ಗೆ ತಿಳಿಯದೆ ಇರುವವರಿಗೆ ಸ್ವಲ್ಪ ಮಾಹಿತಿಗಳು.
* ಕರಿಬೇವನ್ನು ಓವೆನ್ ನಲ್ಲಿ 4-5 ನಿಮಿಷ ಇಡಿ. ಗರಿಗರಿಯಾಗಿ ಒಣಗಿದ ಮೇಲೆ ಕೈಯಲ್ಲಿ ಪುಡಿ ಮಾಡಿಟ್ಟುಕೊಂಡು ಒಂದು ಡಬ್ಬಿಯಲ್ಲಿ ಹಾಕಿಟ್ಟುಕೊಳ್ಳಿ. ಬೇಕಾದ ಎಲ್ಲ ಅಡುಗೆಗಳಿಗೆ ಅದನ್ನು ಒಂದೆರಡು ಚಮಚ ಹಾಕಿ. ಆರೋಗ್ಯಕ್ಕೂ ಒಳ್ಳೆಯದು. ಕರಿಬೇವು ಇಲ್ಲ ಎಂದು ಪೇಚಾಡುವುದು ಬೇಡ.
* ಕೆಂಪು ಮೆಣಸಿನಕಾಯಿಯನ್ನು ಒಂದು ನಿಮಿಷ ಓವೆನ್ ನಲ್ಲಿಡಿ. ಗರಿಗರಿಯಾಗುವುದು. ಬಿಸಿಲಲ್ಲಿ ಒಣಗಿಸುವುದೇ ಬೇಕಾಗೋಲ್ಲ.
* ಬಿಸ್ಕೆಟ್ಸ್, ಚೌಚೌ, ಪುರಿ ಹೀಗೆ ಕೆಲವು ಪದಾರ್ಥಗಳು ಬೇಗ ಮೆತ್ತಗಾಗುತ್ತವೆ. ಹೀಗೆ ಮೆತ್ತಗಾದವನ್ನು ಓವೆನ್ ನಲ್ಲಿ ಒಂದು ನಿಮಿಷಕ್ಕೆ ಇಡಿ. ಮತ್ತೆ ಹೊಸದರಂತೆ ಗರಿ ಗರಿಯಾಗುವವು. ತೇವವಾಗಿರುವ ಉಪ್ಪನ್ನು ಕೂಡಾ ಇಡಬಹುದು.
* ಹಪ್ಪಳವನ್ನು ಎಣ್ಣೆಯಲ್ಲಿ ಕರಿಯುವುದಕ್ಕಿಂತ ಓವೆನ್ನಲ್ಲಿ ಒಂದು ನಿಮಿಷ ಇಡಿ. ಕರಿದ ಹಪ್ಪಳ ಬೇಡ ಎನ್ನುವವರು ದಾರಾಳವಾಗಿ ತಿನ್ನಬಹುದು.
* ಮಿಕ್ಕ ಉಪ್ಪಿಟ್ಟು, ಪಲಾವ್ , ಭಾತ್, ಹೀಗೆ ಮಿಕ್ಕ ಆಹಾರ ಪದಾರ್ಥಗಳು ತಣ್ಣಗಾಗಿದ್ದರೆ ಓವೆನ್ನಲ್ಲಿ ಒಂದು ನಿಮಿಷಕ್ಕೆ ಮಾಡಿ ತಣ್ಣಗಾದ ಅಡುಗೆ ಮತ್ತೆ ಬಿಸಿ ಬಿಸಿಯಾಗಿ ತಿನ್ನಲು ರೆಡಿ.
* ಬೀನ್ಸ್ ಪಲ್ಯ, ಎಲೆಕೋಸು, ತೊಂಡೆಕಾಯಿ, ಬೆಂಡೆಕಾಯಿ ಈ ರೀತಿಯ ಪಲ್ಯಗಳನ್ನು ಮಾಡುವಾಗ ಕೈ ಆಡಿಸುತ್ತಲೇ ಇರಬೇಕು. ಸ್ವಲ್ಪ ಬಿಟ್ಟರು ಸೀದು ಹೋಗುವುದು. ಅದಕ್ಕೆ ನೀವು ಮಾಮೂಲಿನಂತೆ ವಗ್ಗರಣೆಯನ್ನು ಮಾಡಿ ಉಪ್ಪು ಎಲ್ಲ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಓವೆನ್ ಬಟ್ಟಲಿಗೆ ಹಾಕಿ 5-6 ನಿಮಿಷಕ್ಕೆ ಇಟ್ಟು ಆರಾಮಾಗಿ ಬೇರೆ ಕೆಲಸ ಮಾಡಿಕೊಳ್ಳಿ. ಕೊನೆಗೆ ಕಾಯಿತುರಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ತಳ ಸೀಯುವುದಿಲ್ಲ. ವಿಟಮಿನ್ ಕೂಡಾ ನಷ್ಟವಾಗುವುದಿಲ್ಲ.
* ಹಾಲು, ಕಾಫಿ, ಡಿಕಾಕ್ಷನ್ ಗೆ ನೀರು, ಬಿಸಿ ನೀರು ಬೇಕಾದಲ್ಲಿ ಎಲ್ಲಕ್ಕೂ ಒಂದು ನಿಮಿಷ ಓವೆನ್ ಉಪಯೋಗಿಸಿ. ಬೇಗ ಆಗುವುದು. ಒಲೆ ಅಂಟಿಸುವ ಪ್ರಮೇಯವೇ ಬರುವುದಿಲ್ಲ.
* ತರಕಾರಿಗಳನ್ನು ಹಬೆಯಲ್ಲಿ ಬೇಯಿಸಬೇಕಾದರೆ ಓವೆನ್ ನಲ್ಲೆ ಇಡುವ ಬಟ್ಟಲು ಇರುತ್ತದೆ. ಅದರಲ್ಲಿ ತರಕಾರಿ ಹಾಕಿ 3-4 ನಿಮಿಷ ಬೇಯಿಸಿ. ಹಬೆಯಲ್ಲಿ ಬೇಯಿಸಿದ ತರಕಾರಿ ತಿನ್ನಿ ಎಂದು ವೈದ್ಯರು ಹೇಳಿರುತ್ತಾರೆ. ಹೀಗೆ ಬೇಯಿಸಿಕೊಳ್ಳುವುದು ಸುಲಭ ಕೂಡ.
* ಬೇಯಿಸಿದ ಹಸಿ ಕಡಲೆಕಾಯಿ ಬೀಜದ ವಾಸನೆಯೇ ಎಷ್ಟು ಚೆನ್ನಾಗಿರುತ್ತೆ ಅಲ್ವಾ. ಹಸಿ ಕಡಲೆಕಾಯಿ ಬೀಜ ಇಲ್ಲಾ ಎಂದು ಚಿಂತಿಸಬೇಡಿ. ನಿಮಗೆ ತಿನ್ನಬೇಕೆನಿಸಿದಾಗ ಓವೆನ್ ನ ಒಂದು ಬಟ್ಟಲಿಗೆ ಒಣಗಿದ ಕಡಲೆ ಬೀಜ, ಅದು ಮುಳುಗುವಷ್ಟು ನೀರು ರುಚಿಗೆ ಉಪ್ಪು ಹಾಕಿ 5-6 ನಿಮಿಷಕ್ಕೆ ಇಡಿ. ಘಮ ಘಮಿಸುವ ಹಸಿ ಬೇಯಿಸಿದ ಕಡಲೆ ಬೀಜ ತಿನ್ನಲು ರೆಡಿ.
Subscribe to:
Post Comments (Atom)
No comments:
Post a Comment